ಮಡಿಕೇರಿ: ಇತ್ತೀಚೆಗೆ ಗೋಣಿಕೊಪ್ಪ ಪ್ರೌಢಶಾಲೆಯಲ್ಲಿ ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ ಕಾರ್ಯಕ್ರಮ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಆಗ್ನೇಸ್ ನಡೆಸಿಕೊಟ್ಟರು. ಶಿಕ್ಷಕಿಯರಾದ ಹರಿಣಿ, ಲೇಖನಿ ಕಾರ್ಯಕ್ರಮದ ಸಂಚಾಲಕಿ ಕೆ.ಟಿ. ವಾತ್ಸಲ್ಯ ಮಾತನಾಡಿ, ಲೇಖನಿ ಖಡ್ಗಕ್ಕಿಂತ ಹರಿತವಾದದ್ದು, ಲೇಖನಿ ಹಿಡಿದು ವಿಶ್ವ ಮಾನವರಾಗಿ, ಪ್ರತಿಯೊಬ್ಬ ಹೆಣ್ಣುಮಕ್ಕಳು ಶಿಕ್ಷಣ ಪಡೆಯಿರಿ. ವಿದ್ಯಾರ್ಥಿಗಳು ಲೇಖನಿ ಹಿಡಿದು ಡಾಕ್ಟರ್, ಶಿಕ್ಷಕ, ವಿಜ್ಞಾನಿ, ರೈತರಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸರಸ್ವತಿ ಪೂಜೆ ಮಾಡುವುದರ ಮೂಲಕ ಮಕ್ಕಳ ತಾಯಂದಿರ ಜೊತೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ಇದುವರೆಗೆ ಅಕ್ಷರಾಭ್ಯಾಸ ಮಾಡದ ಸುಮಾರು ಹತ್ತು ಮಕ್ಕಳಿಗೆ ಸಾಂಕೇತಿಕವಾಗಿ ಅಕ್ಷರಗಳನ್ನು ಅಭ್ಯಾಸವನ್ನು ಮಾಡಿಸಲಾಯಿತು. ನಂತರ ಈ ವರ್ಷದ ಮೊದಲ ಪೋಷಕರ ಸಭೆಯನ್ನು ನಡೆಸಲಾಯಿತು. ಈ ಸಂದರ್ಭ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪಿ.ಕೆ. ಜನಾರ್ಧನ, ಮುಖ್ಯ ಶಿಕ್ಷಕ ರಜನಿಕಾಂತ್, ಪೋಷಕರು, ಸಹ ಶಿಕ್ಷಕರು ಹಾಜರಿದ್ದರು.ಕಡಂಗ: ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದ ನಿವೃತ್ತ ಮುಖ್ಯ ಶಿಕ್ಷಕಿ ಬೈಚನ ವೈ.ಎ. ತಂಗಮ್ಮ ಮತ್ತು ಅವರ ಪತಿ ಬೈಚನ ಸೋಮಣ್ಣ ಅವರು ಕಡಂಗ ಶಾಲೆಯ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ಗಳನ್ನು ದಾನವಾಗಿ ನೀಡಿದರು.

೧೦೦ ಟೈ ಮತ್ತು ಬೆಲ್ಟ್ಗಳನ್ನು ಶಾಲೆಯ ಮುಖ್ಯ ಶಿಕ್ಷಕಿ ಶಾಂತಿಕುಮಾರಿ ಪಿ.ಎಂ. ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.ವೀರಾಜಪೇಟೆ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಗಳು ಸಹಕಾರಿಯಾಗುತ್ತವೆ ಎಂದು ಹಾಕತ್ತೂರು ಪ್ರೌಢಶಾಲಾ ಮುಖ್ಯ ಶಿಕ್ಷಕಿ ನೀತಾಕುಮಾರಿ ಹೇಳಿದರು.

ಮೂರ್ನಾಡು ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನಿಗಳು ದಿನಕ್ಕೊಂದು ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ವಿಜ್ಞಾನ ಎಷ್ಟು ಮುಂದುವರೆದಿದೆ ಅದಕ್ಕನುಗುಣವಾಗಿ ನಾವು ಕೂಡ ಸರಿಸಮಾನವಾಗಿ ಹೊಂದಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಚೌರೀರ ಡಾ. ಜಗತ್ ತಿಮ್ಮಯ್ಯ ವಹಿಸಿದ್ದರು. ಇದೇ ಸಂದರ್ಭ ದಾನಿಗಳಾದ ನೆರವಂಡ ಜಯ ಮುತ್ತಪ್ಪ ಅವರು ಸಂಸ್ಥೆಗೆ ಒಂದು ಲಕ್ಷ ದತ್ತಿನಿಧಿ ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವೇಣು ಅಪ್ಪಣ್ಣ, ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಸಂಘದ ಸಂಯೋಜಕಿ ಪಿ.ಎಸ್. ಅನುರಾಧ ಮತ್ತಿತರರು ಉಪಸ್ಥಿತರಿದ್ದರು.ನಾಪೋಕ್ಲು: ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು ನಿರಂತರವಾಗಿ ಪಠ್ಯಕ್ರಮಗಳ ಜೊತೆಗೆ ಶಾಲೆಯ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಮುಖ್ಯ ಶಿಕ್ಷಕ ಚೋಕಿರ ತಮ್ಮಯ್ಯ ಹೇಳಿದರು. ಇಲ್ಲಿನ ಬೇತು ಗ್ರಾಮದ ಎಕ್ಸೆಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಶಿಕ್ಷಕಿ ಶರೀನ್ ಪ್ರಮಾಣ ವಚನ ಬೋಧಿಸಿದರು. ಶಾಲಾ ನಾಯಕಿಯಾಗಿ ಯುಕ್ತ ಪೊನ್ನಮ್ಮ ಕೆ.ಎಸ್., ಉಪ ನಾಯಕಿಯಾಗಿ ಫಾತಿಮತುಲ್ ಆಫಿಯ, ಸಾಂಸ್ಕೃತಿಕ ನಾಯಕನಾಗಿ ಮಿಷನ್ ಬಿದ್ದಪ್ಪ, ಉಪ ಸಾಂಸ್ಕೃತಿಕ ನಾಯಕಿಯಾಗಿ ದುಂದುಭಿ ಪಿ.ಬಿ. ಆಯ್ಕೆಯಾದರು. ಕ್ರೀಡಾ ನಾಯಕನಾಗಿ ರಚನ್ ಹೆಚ್.ಎಂ., ಕ್ರೀಡಾ ಉಪನಾಯಕನಾಗಿ ದರ್ಶ ದೇಚಮ್ಮ ಎಂ.ಹೆಚ್. ಸ್ವಚ್ಛತಾ ನಾಯಕನಾಗಿ ಶಯಾನ್ ಮೇದಪ್ಪ ಬಿ.ಎಸ್. ಹಾಗೂ ಉಪ ಸ್ವಚ್ಛತಾ ನಾಯಕಿಯಾಗಿ ಶರಣ್ಯ ಎಂ. ಆಯ್ಕೆಯಾದರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ, ಸಂಚಾಲಕಿ ವಿದ್ಯಾ ಸುರೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಸ್ಪೂರ್ತಿ ಅಪ್ಪಣ್ಣ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಿಲ್ಪಾ ಸ್ವಾಗತಿಸಿ, ಶಿಕ್ಷಕಿ ತನು ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.