ಕೂಡಿಗೆ, ಜು. ೭: ಹಾರಂಗಿ ಜಲಾಶಯ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಪ್ರಥಮ ಹಂತದ ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೊಂಡಿದ್ದಾರೆ.

ಜಿಲ್ಲೆ ಸೇರಿದಂತೆ ಮೈಸೂರು, ಹಾಸನ ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ಹಾರಂಗಿ ಅಣೆಕಟ್ಟೆಯ ಮುಖ್ಯನಾಲೆಯ ಮೂಲಕ ನೀರನ್ನು ಹರಿಸುವುದು ಮತ್ತು ಜಿಲ್ಲೆಯ ಮತ್ತು ಪಕ್ಕದ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಎಡದಂಡೆ, ಬಲದಂಡೆ ನಾಲೆಯ ಮೂಲಕ ನೀರನ್ನು ಈ ಸಾಲಿನಲ್ಲಿ ವ್ಯವಸ್ಥಿತವಾಗಿ ಹರಿಸಲು ಕಾವೇರಿ ನೀರಾವರಿ ನಿಗಮದ ಮೂಲಕ ಮುಖ್ಯ ನಾಲೆಯ ಕಾಮಗಾರಿಯು ಸಹ ನಡೆದಿದ್ದು, ಕ್ಷೇತ್ರದ ಶಾಸಕ ಮತ್ತು ಮೈಸೂರು, ಹಾಸನ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆದು, ಸಭೆಯ ತೀರ್ಮಾನದಂತೆ ರೈತರ ಬೇಸಾಯಕ್ಕೆ ನಾಲೆಯ ಮೂಲಕ ಅಣೆಕಟ್ಟೆಯಿಂದ ನೀರುಹರಿಸುವ ಎಲ್ಲಾ ವ್ಯವಸ್ಥೆಗಳು ಈಗಾಗಲೇ ಇಲಾಖೆಯ ವತಿಯಿಂದ ಸಿದ್ಧಗೊಳ್ಳುತ್ತಿವೆ.

ಇದರ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ತಮ್ಮ ತಮ್ಮ ಜಮೀನಿನ ಉಳುಮೆಗೆ ಸಿದ್ಧರಾಗಿರುತ್ತಾರೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಭತ್ತದ ನಾಟಿಯ ಬೇಸಾಯ ಮಾಡಲು ಬೇಕಾಗುವ ಭತ್ತದ ಸಸಿಮಡಿಗಳ ಸಿದ್ದತೆಗೆ ಪೂರಕವಾಗಿ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತವಾದ ವಿವಿಧ ಬಗೆಯ ಹೈಬ್ರೀಡ್ ತಳಿಯ, ವಿವಿಧ ಕಂಪೆನಿಯ ಭತ್ತದ ಬಿತ್ತನೆ ಬೀಜಗಳನ್ನು ಖರೀದಿಸಿ ಸಸಿ ಮಡಿಗಳನ್ನು ಸಿದ್ಧತೆ ಮಾಡುವಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ತೊಡಗಿದ್ದಾರೆ.

ಈ ಸಾಲಿನಲ್ಲಿ ರೈತರು ನೂತನ ತಂತ್ರಜ್ಞಾನದ ಮೂಲಕ ತಮ್ಮ ಜಮೀನಿನಲ್ಲಿ ಹೆಚ್ಚುವರಿಯಾಗಿ ಭತ್ತದ ಬೆಳೆಯನ್ನು ಬೆಳೆಯಲು ರೈತರು ಈ ಬಾರಿ ಸಾವಯವ ಗೊಬ್ಬರ ಬಳಕೆ ಮಾಡುವ ಉದ್ದೇಶದಿಂದ ಈಗಾಗಲೇ ಎಲೆಗೊಬ್ಬರ ಮತ್ತು ಎರೆಹುಳು ಗೊಬ್ಬರವನ್ನು ತಯಾರಿಸಿ ತಮ್ಮ ಜಮೀನಿನಲ್ಲಿ ಹಾಕಿ ಇದರ ಜೊತೆಯಲ್ಲಿ ಕೃಷಿ ಇಲಾಖೆಯ ಸೂಚನೆಯಂತೆ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಸಾವಯವ ಗೊಬ್ಬರ, ಸುಣ್ಣವನ್ನು ಬೆರೆಸಿ ಜಮೀನಿನಲ್ಲಿ ಉಳುಮೆ ಮಾಡುವ ಕಾರ್ಯ ನಡೆದಿದೆ.