ಮಡಿಕೇರಿ, ಜು. ೭ : ಎಲ್ಲಾ ಪಕ್ಷಗಳು ಕೊಡಗಿನಲ್ಲಿ ಸದ್ದಿಲ್ಲದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಮೂಲಕ ಯಶಸ್ಸು ಸಾಧಿಸಿರುವ ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕೂಡ ಮೈತ್ರಿ ಮುಂದುವರಿಸುವ ಸಾಧ್ಯತೆ ಇದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಕೂಡ ಮೈತ್ರಿ ಮುಖಾಂತರ ಎದುರಿಸಲು ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಮಲ-ದಳ ಮೈತ್ರಿಯಾದರೆ ಕೊಡಗು ಜಿಲ್ಲೆಯಲ್ಲಿ ಕೂಡ ಮೈತ್ರಿ ಪಾಲನೆ ಮಾಡಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಬಿಜೆಪಿಯಲ್ಲಿ ಹೊಸ ಉತ್ಸಾಹ ಬಂದಿದೆ.

ಜಿಲ್ಲೆಯಲ್ಲಿ ೨೫ ವರ್ಷಗಳ ಬಳಿಕ ಎರಡು ಶಾಸಕರನ್ನು ಕಳೆದುಕೊಂಡ ಬಿಜೆಪಿ ಕೊಡಗಿನಲ್ಲಿ ಮಂಕಾಗಿತ್ತು. ಇದೀಗ ಲೋಕಸಭಾ ಚುನಾವಣೆಯ ಗೆಲುವಿನ ಬಳಿಕ ಪುಟಿದೆದ್ದಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರವನ್ನು ಮರಳಿ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ. ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದರೆ ಜೆಡಿಎಸ್ ಬಲಿಷ್ಠವಾಗಿರುವ ಭಾಗಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪರ್ಧಿಸುವ ಅವಕಾಶ ನೀಡಿ ಮೈತ್ರಿ ಪಾಲನೆ ಮಾಡಬೇಕಾಗುತ್ತದೆ.

ಜಿಲ್ಲೆಯ ಮಡಿಕೇರಿ ಕ್ಷೇತ್ರದಲ್ಲಿ ಪ್ರಬಲವಾಗಿದ್ದ ಜೆಡಿಎಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಕಳೆದ ಒಂದೂವರೆ ವರ್ಷದಿಂದ ಜೆಡಿಎಸ್ ಪಕ್ಷಕ್ಕೆ ಜಿಲ್ಲಾಧ್ಯಕ್ಷರಿಲ್ಲದೆ ನಾವಿಕನಿಲ್ಲದ ಹಡಗಿನಂತಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಮಟ್ಟದ ನಾಯಕರು ಜಿಲ್ಲೆಗೆ ಭೇಟಿ ನೀಡಿ ಜೆಡಿಎಸ್ ನಾಯಕರ ಸಭೆಯನ್ನು ನಡೆಸಿ ಪಕ್ಷಕ್ಕೆ ಸಂಘಟಿಸುವAತೆ ಸೂಚನೆ ನೀಡಿದ್ದರು.

ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಗೆಲ್ಲುವುದರ ಮೂಲಕ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದು ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಶಕ್ತಿ ಬಂದAತಿದೆ.

ಜಿಲ್ಲೆಯಲ್ಲಿ ಬಿಜೆಪಿ ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕೂಡ ಏಕಾಂಗಿ ಸ್ಪರ್ಧೆ ಮಾಡುವ ಶಕ್ತಿ ಹೊಂದಿದೆ.

೨೦೧೬ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ೧೮ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಜೆಡಿಎಸ್ ಕೇವಲ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಗೆದ್ದಿತ್ತು. ಮೂರು ತಾಲೂಕು ಪಂಚಾಯಿತಿ ಕೂಡ ಕಳೆದ ಬಾರಿ ಬಿಜೆಪಿ ವಶದಲ್ಲಿತ್ತು.

ಆದರೆ ಈ ಬಾರಿಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯೂ ವಿಭಿನ್ನವಾಗಿರಲಿದೆ. ಏಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಎರಡು ಶಾಸಕರ ಬಲ ಇದೆ.

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಇಂದಿಗೂ ಕೂಡ ಜೆಡಿಎಸ್ ಬಲಿಷ್ಠವಾಗಿದೆ. ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಾಂತರ ಸ್ಪರ್ಧಿಸಿದರೆ, ಜಿಲ್ಲೆಯ ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕನಿಷ್ಟ ೩-೫ ಸ್ಥಾನಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ.

ಕುಶಾಲನಗರ ತಾಲೂಕಿನಲ್ಲಿ ಎರಡು, ಸೋಮವಾರಪೇಟೆ ತಾಲೂಕಿನಲ್ಲಿ ಒಂದು ಹಾಗೂ ವೀರಾಜಪೇಟೆ ಅಥವಾ ಮಡಿಕೇರಿ ತಾಲೂಕಿನಲ್ಲಿ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸುವ ಒಲವು ತೋರಿದೆ.

ಜಿಲ್ಲೆಯ ಜೆಡಿಎಸ್ ಪಕ್ಷದ ವಿಶ್ವಾಸನೀಯ ಮೂಲಗಳ ಪ್ರಕಾರ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಕುಶಾಲನಗರ ತಾಲೂಕಿನ ಹೆಬ್ಬಾಲೆ, ಗುಡ್ಡೆಹೊಸೂರು, ವೀರಾಜಪೇಟೆ ತಾಲೂಕಿನ ಹಾಲುಗುಂದ ಅಥವಾ ಮಡಿಕೇರಿ ತಾಲೂಕಿನ ಕಾಂತೂರು ಮೂರ್ನಾಡು ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್ ಕೇಳುವ ಸಾಧ್ಯತೆ ಇದೆ.

(ಮೊದಲ ಪುಟದಿಂದ)

ಅಲ್ಪಸAಖ್ಯಾತರನ್ನು ಸೆಳೆಯಲು ಜೆಡಿಎಸ್ ತಂತ್ರ!

ಕೊಡಗು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮತದಾರರು ಜೆಡಿಎಸ್ ಪಕ್ಷಕ್ಕೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಕೈ ಕೊಟ್ಟಿತ್ತು. ಇದೀಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರನ್ನು ಸೆಳೆಯಲು ಹೊಸ ತಂತ್ರದ ಮೊರೆ ಹೋಗಿದೆ.

ಜಿಲ್ಲೆಯಲ್ಲಿ ಮೈತ್ರಿ ಮುಖಾಂತರ ಚುನಾವಣೆ ಎದುರಿಸಿದರೆ ಕೊಡಗಿನಲ್ಲಿ ಬಿ.ಸಿ.ಎಂ ಮೀಸಲಾತಿ ಬರುವ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.

ಗೆಲ್ಲುವ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮೈತ್ರಿ ಮುಖಾಂತರ ಟಿಕೆಟ್ ನೀಡಿ ಮುಸ್ಲಿಂ ಮತದಾರರನ್ನು ಮತ್ತೆ ತನ್ನತ್ತ ಸೆಳೆಯುವ ತಂತ್ರಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ. -ಕೆ.ಎಂ. ಇಸ್ಮಾಯಿಲ್ ಕಂಡಕರೆ