ಸೋಮವಾರಪೇಟೆ, ಜು. ೭: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು, ಶಾಸಕ ಮಂತರ್ ಗೌಡ ಅವರೊಂದಿಗೆ ಚರ್ಚೆ ನಡೆಸಿದರು.

ಶಾಸಕರ ನಿವಾಸದಲ್ಲಿ ಭೇಟಿ ಮಾಡಿದ ಸಾರ್ವಜನಿಕರು, ತಮ್ಮ ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಸೋಮವಾರಪೇಟೆಯಿಂದ ಕೂತಿ ಮಾರ್ಗವಾಗಿ ಗಡಿಕಲ್ಲು ಸಂಪರ್ಕಿಸುವ ರಸ್ತೆ ಕಿರಿದಾಗಿದ್ದು, ಸಂಚಾರ ದುಸ್ತರವಾಗಿದೆ. ಕಳೆದ ಸಾಲಿನಲ್ಲಿ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿದ್ದರೂ ಕೆಲ ಭಾಗದಲ್ಲಿ ಮಾತ್ರ ಅಗಲೀಕರಣ ಮಾಡಲಾಗಿದೆ. ಕಿರಿದಾದ ರಸ್ತೆಯಲ್ಲಿ ಬಸ್‌ಗಳು ಸೇರಿದಂತೆ ಬೃಹತ್ ವಾಹನಗಳು ಸಂಚರಿಸುತ್ತಿದ್ದು, ಅವಘಡಗಳು ಸಂಭವಿಸುತ್ತಲೇ ಇವೆ. ಈ ಹಿನ್ನೆಲೆ ರಸ್ತೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸೋಮವಾರಪೇಟೆಯಿಂದ ಗಡಿಕಲ್ಲುವರೆಗಿನ ೧೨ ಕಿ.ಮೀ. ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣಕ್ಕೆ ಈಗಾಗಲೇ ೨೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಆಗಸ್ಟ್ ಮೊದಲನೇ ವಾರದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮಂತರ್ ಗೌಡ ಹೇಳಿದರು.

ಯಡೂರಿನಲ್ಲಿರುವ ಫೀಡರ್‌ನಿಂದ ಸುಮಾರು ೧೦೦ ಕಿ.ಮೀ. ಸುತ್ತಳತೆಗೆ ವಿದ್ಯುತ್ ಸರಬರಾಜು ಆಗುತ್ತಿದೆ. ಹೀಗಾಗಿ ತೋಳೂರುಶೆಟ್ಟಳ್ಳಿ ಆಗಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಮಳೆಗಾಲದಲ್ಲಿ ವಾರಗಟ್ಟಲೆ ವಿದ್ಯುತ್ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಯಡೂರಿನಿಂದ ಪ್ರತ್ಯೇಕ ಫೀಡರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ರಾಮನಾಥಪುರದಿಂದ ಸೋಮವಾರಪೇಟೆ, ಕೂತಿ, ವನಗೂರು ಕೂಡುರಸ್ತೆ, ಸುಬ್ರಹ್ಮಣ್ಯ ಮಾರ್ಗದಲ್ಲಿ ನೂತನ ಬಸ್ ಸೇವೆಗೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅರಕಲಗೂಡು ಕ್ಷೇತ್ರದ ಶಾಸಕರಾಗಿದ್ದ ರಾಮಸ್ವಾಮಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರೊಂದಿಗೂ ಮಾತುಕತೆ ನಡೆಸಲಾಗಿತ್ತು. ಆದರೆ ಈವರೆಗೆ ಕಾರ್ಯಗತಗೊಂಡಿಲ್ಲ ಎಂದು ಗಮನಕ್ಕೆ ತಂದರು.

ಇದರೊAದಿಗೆ ಸಿ ಮತ್ತು ಡಿ ಜಾಗದ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಮನವಿ ಮಾಡಿದರು. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಗೆಹರಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಅಂತೆಯೇ ಫಾರಂ ನಂಬರ್ ೫೩ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಮಿತಿ ರಚನೆಯಾದ ತಕ್ಷಣ ವಿಲೇವಾರಿ ಮಾಡಲಾಗುವುದು. ಕಡತಗಳ ವಿಲೇವಾರಿಗೆ ಯಾರೂ ಸಹ ಅಧಿಕಾರಿಗಳಿಗೆ ಹಣ ನೀಡಬಾರದು ಎಂದು ಶಾಸಕ ಮಂತರ್ ಗೌಡ ಹೇಳಿದರು.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದ ರಸ್ತೆಗಳು ದುಸ್ಥಿತಿಯಲ್ಲಿವೆ. ಈ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಗ್ರಾ.ಪಂ.ಗೆ ೫೦ ರಿಂದ ೬೦ ಲಕ್ಷ ಅನುದಾನ ಬಿಡುಗಡೆಗೊಳಿಸಲು ಕ್ರಮ ವಹಿಸುವುದಾಗಿ ಶಾಸಕರು ಭರವಸೆ ನೀಡಿದರು. ತೋಳೂರುಶೆಟ್ಟಳ್ಳಿ ಗ್ರಾಮದ ಪ್ರಮುಖರಾದ ಐ.ಹೆಚ್. ನಿಂಗಪ್ಪ, ಹರಪಳ್ಳಿ ಬಸವರಾಜ್, ಎಡದಂಟೆ ಲವ, ಕೂತಿ ಗ್ರಾಮಾಧ್ಯಕ್ಷ ಹೆಚ್.ಎಂ. ಜಯರಾಮ್, ಮಾಜೀ ಅಧ್ಯಕ್ಷ ಹೆಚ್.ಡಿ. ಮೋಹನ್, ಕೆ.ಟಿ. ಜೋಯಪ್ಪ, ಸುರೇಶ್ ಚಕ್ರವರ್ತಿ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಸಭೆಯಲ್ಲಿದ್ದರು. ಕೂತಿ ಗ್ರಾಮದ ಬಹುತೇಕ ಎಲ್ಲಾ ಮನೆಯಿಂದಲೂ ಗ್ರಾಮಸ್ಥರು ಆಗಮಿಸಿದ್ದರು.