ಮಡಿಕೇರಿ, ಜು. ೭: ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಮುದಾಯದವರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಪ್ರತಿಭೆ ಎಂಬುದು ಎಲ್ಲರಲ್ಲೂ ಇರುತ್ತದೆ; ಅದನ್ನು ಗುರುತಿಸುವ ಕೆಲಸವಾಗಬೇಕು. ಹಿಂದೂ ಸಮಾಜ ಒಗ್ಗಟ್ಟಾಗಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಎಂಬುದು ಅತೀ ಮುಖ್ಯ. ಶಿಕ್ಷಣವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ. ಸುಧೀರ್ ಮಾತನಾಡಿ, ನಮ್ಮ ಕಲೆ- ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಿಂದೂ ಮಲಯಾಳಿ ಸಮಾಜ ಕೆಲಸ ಮಾಡುತ್ತಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯನ್ ವಹಿಸಿದ್ದರು. ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್, ಮಲಯಾಳಿ ಸಮಾಜ ಸ್ಥಾಪಕಾಧ್ಯಕ್ಷ ಕೆ.ಎಸ್. ರಮೇಶ್, ಪ್ರಧಾನ ಸಲಹೆಗಾರ ಟಿ.ಆರ್. ವಾಸ್‌ದೇವ್, ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್, ಮಲಯಾಳಿ ಸಮಾಜದ ಖಜಾಂಚಿ ಕೆ.ಬಾಬು, ಮತ್ತಿತರರು ಉಪಸ್ಥಿತರಿದ್ದರು.