ಸುಂಟಿಕೊಪ್ಪ, ಜು. ೭: ಸ್ವಸ್ಥ - ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ೪ ಜುಲೈ ೨೦೨೪ ರಂದು ಅಣಬೆ ಕೃಷಿ ಮತ್ತು ಎರೆಗೊಬ್ಬರ ತಯಾರಿಕೆಯ ೧ ದಿನದ ಸ್ವ-ಉದ್ಯೋಗ ತರಬೇತಿ ಶಿಬಿರ ಮತ್ತು ಪ್ರಾಯೋಗಿಕ ಕಾರ್ಯಾಗಾರವನ್ನು ವಿಶೇಷಚೇತನರು ಮತ್ತು ಅವರ ಪಾಲಕರಿಗೆ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿಜ್ಞಾನಿ ಪ್ರಭಾಕರ್ ಅವರು ಆಗಮಿಸಿ, ನಿಸರ್ಗಕ್ಕೆ ಪೂರಕವಾದ ಕೃಷಿ ಪದ್ಧತಿಗಳು, ಎರೆಗೊಬ್ಬರ ತಯಾರಿಕೆಯಲ್ಲಿ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳ ಬಳಕೆ, ಅಣಬೆಗಳ ಪ್ರಬೇಧಗಳು ಮತ್ತು ಬೇಸಾಯ ಪದ್ಧತಿಗಳು, ಕಾರ್ಯಸಾಧ್ಯತೆಗಳು ಮತ್ತು ಬೆಳೆಯ ವಹಿವಾಟಿನ ಬಗ್ಗೆ ಮಾಹಿತಿ ಇತ್ತರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀಣಾ ಅಶೋಕ್ ಅವರು ಅಣಬೆ ಬೇಸಾಯದ ಪ್ರಾತ್ಯಕ್ಷಿಕೆ ನೀಡಿದರು. ಡಾ. ಮೃಣಾಲ್ ದೀಪಕ್‌ರವರು ಮಕ್ಕಳಲ್ಲಿ ಪೌಷ್ಟಿಕತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ೨೯ ಫಲಾನುಭವಿಗಳು ಈ ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು.

ಟಾಟಾ ಸಂಸ್ಥೆಯ ಸುಂಟಿಕೊಪ್ಪ ವ್ಯವಸ್ಥಾಪಕ ಗೌತಮ್ ಮೈನಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.