ಗೋಣಿಕೊಪ್ಪಲು, ಜು. ೮: ಮೂರು ನಾಲ್ಕು ವರ್ಷಗಳಲ್ಲಿ ಕೊಡಗು ಜಿಲ್ಲೆಯ ರಾಜಕಾರಣದ ಚಿತ್ರಣವೇ ಬದಲಾಗಿದೆ, ಇದಕ್ಕೆ ನಾನು ಶಾಸಕನಾಗಿ ಆಯ್ಕೆಯಾಗಿರು ವುದೇ ಉದಾಹರಣೆಯಾಗಿದೆ. ನಾನು ಎಂದಿಗೂ ಪಕ್ಷ, ಜಾತಿ, ಧರ್ಮ, ಸಂಘಟನೆ, ಯಾವ ಬೇಧ ಭಾವವಿಲ್ಲದೆ ಜನರ ಸೇವಕನಾಗಿ ಜನರ ಸೇವೆ ಮಾಡುತ್ತಿದ್ದೇನೆ. ಅರ್ಥ ಮಾಡಿಕೊಂಡಿರುವ ಜನರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅನೇಕ ಮಂದಿ ತಮ್ಮ ಪಕ್ಷದ ಸಿದ್ದಾಂತವನ್ನು ಬದಿಗೊತ್ತಿ ನನ್ನೊಂದಿಗೆ ನಿಂತಿದ್ದಾರೆ ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮುಕ್ತ ಮಾತನಾಡಿದರು.

ಹುದಿಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ೩೨ಕ್ಕೂ ಅಧಿಕ ಮಂದಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ಮಂದಿ ಅವರ ಸಂಕಷ್ಟದ ಸಮಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ನನ್ನಿಂದ ವೈಯುಕ್ತಿಕವಾಗಿ ಅನುಕೂಲ ಪಡೆದು ನನಗೆ ಅವರ ಅಗತ್ಯತೆ ಬಿದ್ದಾಗ ನನ್ನೊಂದಿಗೆ ನಿಲ್ಲಲ್ಲಿಲ್ಲ. ಈ ಬಗ್ಗೆ ನಾನು ಮನಸನ್ನು ಕೆಡಿಸಿಕೊಳ್ಳ ಲಾರೆ, ನನ್ನ ವಿರೋಧಿಗಳು ನನ್ನೊಂ ದಿಗೆ ಧೈರ್ಯವಾಗಿ ನಿಂತಿದ್ದಾರೆ. ನನ್ನೊಂದಿಗೆ ನಿಲ್ಲಬೇಕಾದವರು ನಿಲ್ಲಲಿಲ್ಲ. ಇದು ಬೇಸರ ತಂದಿದೆ ಎಂದು ಅವರು ಹೇಳಿದರು.

೪ ತಿಂಗಳಿನಲ್ಲಿ ಗ್ರಾಮೀಣ ರಸ್ತೆಗೆ ರೂ. ೨೯ ಕೋಟಿ ಅನುದಾನ ವಿನಿಯೋಗಿಸಲಾಗಿದೆ. ಮತ್ತಷ್ಟು ತಡೆಗೋಡೆ, ರಸ್ತೆ, ಮೋರಿ, ಇನ್ನಿತರ ಅಗತ್ಯತೆ ಬಗ್ಗೆ ಜನ ಪ್ರಸ್ತಾಪಿಸುತ್ತಾರೆ. ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಎಲ್ಲಾ ಪ್ರಯತ್ನಗಳು ಮಾಡಿರುವೆ; ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಕರ್ಯವನ್ನು ಒದಗಿಸುವ, ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಮಾಡಲಿದ್ದೇನೆ ಎಂದರು. ಕಾಂಗ್ರೆಸ್ ಸೇರ್ಪಡೆ ಅವರವರ ಕೆಲಸದ ಸ್ವಾರ್ಥಕೋಸ್ಕರ ಆಗಬಾರದು. ಚುನಾವಣೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನಕ್ಕೆ ಕೈ ಜೋಡಿಸಬೇಕು. ಪಕ್ಷದಲ್ಲಿ ಉತ್ತಮ ಅವಕಾಶಗಳು ಒದಗಿ ಬಂದಾಗ ತಮ್ಮನ್ನು ಪರಿಗಣನೆ ಮಾಡಲಾಗುವುದು. ಕ್ಷೇತ್ರದ ಅಭಿವೃದ್ದಿಗಾಗಿ ತಾವುಗಳು ಕೈ ಜೋಡಿಸುವಂತೆ ಮನವಿ ಮಾಡಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮಿದೇರಿರ ನವೀನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸಿಗ ಚೆಕ್ಕೆರ ಸೋಮಯ್ಯ ಮಾತನಾಡಿದರು. ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲAಡ ಸೂರಜ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಾದ ಚೆಕ್ಕೆರ ವಾಸು ಕುಟ್ಟಪ್ಪ, ಅಪ್ಪಚಂಗಡ ಮೋಟಯ್ಯ, ನೂರೆರ ಮನೋಹರ್ ಸೋಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

-ಹೆಚ್.ಕೆ.ಜಗದೀಶ್