ಸಿದ್ದಾಪುರ, ಜು. ೮: ಪತ್ರಿಕಾ ದಿನಾಚರಣೆಯ ಅಂಗವಾಗಿ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಮ್ಮತ್ತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಆಟ-ಪಾಠದೊಂದಿಗೆ ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಸರ್ಕಾರಿ ಶಾಲಾ ಮಕ್ಕಳು, ಖಾಸಗಿ ಶಾಲಾ ಮಕ್ಕಳೊಂದಿಗೆ ಸ್ಪರ್ಧೆ ಮಾಡುವಂತಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೂ ಹೆಚ್ಚು ಪ್ರೋತ್ಸಾಹದ ಅಗತ್ಯವಿದೆ ಎಂದರು. ಶಾಲಾ ಮುಖ್ಯೋಪಾಧ್ಯಾಯ ದೊಡ ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫ, ಸದಸ್ಯರಾದ ಎಂ.ಎ. ಕೃಷ್ಣ, ಆಂಟೋಣಿ, ಶಾಲಾ ಶಿಕ್ಷಕರು ಹಾಜರಿದ್ದರು. ಸ್ಪರ್ಧೆಯಲ್ಲಿ ೮ನೇ ತರಗತಿ ವಿಭಾಗದಲ್ಲಿ ತೇಜಸ್ ಪ್ರಥಮ, ಅಭಿ ದ್ವಿತೀಯ ಹಾಗೂ ಅಶ್ವದಿ ತೃತೀಯ ಬಹುಮಾನ ಪಡೆದುಕೊಂಡರು. ೯ನೇ ತರಗತಿ ವಿಭಾಗದಲ್ಲಿ ವೈ.ಎನ್. ಕಾವ್ಯ ಪ್ರಥಮ, ಮೋನಿಕ ದ್ವಿತೀಯ ಹಾಗೂ ವಿದ್ಯಾ ತೃತೀಯ ಬಹುಮಾನ ಪಡೆದುಕೊಂಡರು. ೧೦ನೇ ತರಗತಿ ವಿಭಾಗದಲ್ಲಿ ಸುಶ್ಮಿತ ಪ್ರಥಮ, ಮೊಹಮ್ಮದ್ ನಿಯಾಸ್ ದ್ವಿತೀಯ ಹಾಗೂ ಗೌರಿ ತೃತೀಯ ಬಹುಮಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ೪೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.