ಮಡಿಕೇರಿ, ಜು. ೮: ಜಿಲ್ಲೆಯಲ್ಲಿ ಪ್ರಸ್ತುತ ಮಳೆಯ ರಭಸ ಹೆಚ್ಚು ತೀವ್ರತೆ ಕಾಣದಿದ್ದರೂ, ಮಳೆಗಾಲದ ಸನ್ನಿವೇಶ ಮುಂದುವರೆದಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವೇ ಇದ್ದು, ನಡು ನಡುವೆ ಒಂದಷ್ಟು ಮಳೆಯಾಗುತ್ತಿದೆ. ಕಳೆದ ವಾರ ಒಂದಷ್ಟು ಬಿರುಸು ತೋರಿದ್ದ ಆರ್ದ್ರಾ ಮಳೆ ನಕ್ಷತ್ರ ಮುಕ್ತಾಯಗೊಂಡಿದ್ದು, ಇದೀಗ ತಾ. ೬ರಿಂದ ಪುನರ್ವಸು ಮಳೆ ಆರಂಭಗೊAಡಿದೆ. ಮಳೆಯೊಂದಿಗೆ ಒಂದಷ್ಟು ಚಳಿಯ ಅನುಭವವೂ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಯಲ್ಲಿ ೦.೬೪ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೩೮, ವೀರಾಜಪೇಟೆ ೦.೪೪, ಪೊನ್ನಂಪೇಟೆ ೦.೬೨, ಸೋಮವಾರಪೇಟೆ ೦.೪೭ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೩೦ ಇಂಚು ಮಳೆಯಾಗಿದೆ.

ಭಾಗಮಂಡಲ ಹೋಬಳಿಗೆ ಕಳೆದ ೨೪ ಗಂಟೆಗಳಲ್ಲಿ ೨.೦೨, ಸಂಪಾಜೆ ೧.೮೨, ಮಡಿಕೇರಿ ೦.೮೪, ನಾಪೋಕ್ಲು ೦.೭೬ ಇಂಚು ಮಳೆಯಾಗಿದೆ. ಮುಂಗಾರು ಉತ್ತಮವಾಗಿರುವುದರಿಂದ ಕೃಷಿ ಕೆಲಸಗಳು ಚುರುಕು ಕಾಣುತ್ತಿದ್ದು, ಹಲವೆಡೆ ಈಗಾಗಲೇ ಭತ್ತದ ಬಿತ್ತನೆ ಕಾರ್ಯವೂ ನಡೆದಿದೆ.