ವೀರಾಜಪೇಟೆ, ಜು. ೮: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರ ಐವತ್ತನೆ ವರ್ಷದ ಹುಟ್ಟುಹಬ್ಬವನ್ನು ತಾ. ೯ ರಂದು ಆಚರಿಸಲಾಗುತ್ತಿದ್ದು, ಇದರ ಪ್ರಯುಕ್ತ ವೀರಾಜಪೇಟೆಯ ದೊಡ್ಡಟ್ಟಿ ಚೌಕಿಯಲ್ಲಿ ವೀರಾಜಪೇಟೆ ಪುರಸಭೆ ಸದಸ್ಯರುಗಳಿಂದ ಸಾರ್ವಜನಿಕರು ಮತ್ತು ಕಾರ್ಮಿಕರಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ರಾಜೇಶ್ ಪದ್ಮನಾಭ ಅವರು ಹುಟ್ಟುಹಬ್ಬದ ಸಲುವಾಗಿ ಎಲ್ಲಾ ಕಡೆ ಹಲವಾರು ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ ೧೦ ಗಂಟೆಗೆ ಪುರಸಭೆ ಸಭಾಂಗಣದಲ್ಲಿ ಶಾಸಕ ಪೊನ್ನಣ್ಣ ಅವರು ಪೌರ ಕಾರ್ಮಿಕರ ಜೊತೆಯಲ್ಲಿ ಕೇಕ್ ಕತ್ತರಿಸಲಿದ್ದಾರೆ. ನಂತರ ೧೦.೩೦ ಗಂಟೆಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಿದ್ದಾರೆ ಎಂದರು. ಪುರಸಭೆ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ೫೦ನೇ ವಸಂತಕ್ಕೆ ಕಾಲಿಡುತ್ತಿರುವ ಶಾಸಕ ಪೊನ್ನಣ್ಣ ಅವರು ಹಗಲು ರಾತ್ರಿ ಎನ್ನದೇ ನಮ್ಮ ಕ್ಷೇತ್ರಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿ ದುಡಿಯುತ್ತಿ ದ್ದಾರೆ. ಅವರಿಗೆ ಇನ್ನಷ್ಟು ಆಯುಷ್ಯ, ಆರೋಗ್ಯ ವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ನಾವು ಅವರ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಲು ತೀರ್ಮಾನ ಮಾಡಿದ್ದೇವೆ. ಪುರಸಭೆ ಸದಸ್ಯ ರಜನೀಕಾಂತ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅಬ್ದುಲ್ ಜಲೀಲ್, ಮನೆಯಪಂಡ ದೇಚಮ್ಮ ಕಾಳಪ್ಪ, ಸಿ.ಕೆ ಪ್ರಥ್ವಿನಾಥ್, ಪಸಿಹಾ ತಬ್ಸಂ, ಎಸ್. ಎಚ್ ಮತೀನ್, ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಸಿ.ಬಿ ರವಿ, ಜಿ.ಜಿ. ಮೋಹನ್, ದಿನೇಶ್ ನಂಬಿಯಾರ್ ಇದ್ದರು.