ಸೋಮವಾರಪೇಟೆ, ಜು. ೮: ಸ್ವತಃ ವೈದ್ಯರಾಗಿ ಶಾಸಕರಾಗಿರುವ ಡಾ. ಮಂತರ್ ಗೌಡ ಅವರು ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸರ್ಜರಿ ಮಾಡಲು ಮುಂದಾಗಿದ್ದು, ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಸುಧಾರಣಾ ಕ್ರಮಗಳಿಗೆ ನಿರ್ದೇಶನ ನೀಡುವ ಮೂಲಕ ಹೆಚ್ಚಿನ ಭರವಸೆ ಮೂಡಿಸಿದ್ದಾರೆ.

ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರಿ ಆಸ್ಪತ್ರೆಯ ಪ್ರಥಮ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಮಂತರ್ ಗೌಡ ಅವರು, ಆಸ್ಪತ್ರೆಯಲ್ಲಿ ಕಲ್ಪಿಸಬೇಕಾದ ಹಲವಷ್ಟು ಸುಧಾರಿತ ಕ್ರಮಗಳ ಬಗ್ಗೆ ದೀರ್ಘ ಚರ್ಚೆ ನಡೆಸುವ ಮೂಲಕ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ಅಡಿಗಲ್ಲು ಇಟ್ಟಿದ್ದಾರೆ.

ಆಸ್ಪತ್ರೆಗೆ ೪೦ ಲಕ್ಷ ರೂ. ವೆಚ್ಚದಲ್ಲಿ ಮಾಡ್ಯುಲರ್ ಶಸ್ತçಚಿಕಿತ್ಸಾ ಕೊಠಡಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಬಹುಮುಖ್ಯ ವಿಭಾಗಗಳಿಗೆ ಅಗತ್ಯವಿರುವ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಶಸ್ತçಚಿಕಿತ್ಸಾ ಕೊಠಡಿ ಪ್ರಾರಂಭವಾದರೆ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಜಿಲ್ಲಾ ಕೇಂದ್ರ ಅಥವಾ ಬೇರೆಡೆಗೆ ತೆರಳುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ಅರೆವಳಿಕೆ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಮಂತರ್ ಭರವಸೆಯಿತ್ತರು.

ಇದುವರೆಗೆ ಆಸ್ಪತ್ರೆಯಲ್ಲಿ ಇದ್ದ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬದಲಾಗಲಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕುವಂತಾಗಬೇಕು ಎಂಬ ಆಶಯ ತನ್ನದು ಎಂದು ಖಡಕ್ಕಾಗಿ ನುಡಿದ ಶಾಸಕರು, ನೂತನವಾಗಿ ನೇಮಕಗೊಂಡ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಸೇವೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಆಸ್ಪತ್ರೆಗೆ ನೇಮಕಗೊಂಡ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಆಗಬೇಕು. ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭ ಯಾವುದೋ ಅನಾವಶ್ಯಕ ಕಾರಣಗಳನ್ನು ನೀಡಿ, ಉಡಾಫೆಯ ಮಾತನಾಡುವುದನ್ನು ನಿಲ್ಲಿಸಬೇಕು. ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು ಎಂದು ಮನವಿ ಮಾಡಿದರು.

ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸಕಾರಾತ್ಮಕ ಸ್ಪಂದನ ದೊರೆಯದಿದ್ದರೆ ನೇರವಾಗಿ ತನ್ನ ಗಮನಕ್ಕೆ ತನ್ನಿ ಎಂದ ಶಾಸಕರು, ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ವೈದ್ಯರ ನೇಮಕಾತಿಗಾಗಿ ಕೌನ್ಸಿಲಿಂಗ್ ನಡೆಯಲಿದ್ದು, ಕೊಡಗು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ

(ಮೊದಲ ಪುಟದಿಂದ) ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ. ಸೋಮವಾರಪೇಟೆ ಆಸ್ಪತ್ರೆಗೂ ಅಗತ್ಯ ವೈದ್ಯರ ನೇಮಕವಾಗಲಿದೆ ಎಂದರು.

ಆಸ್ಪತ್ರೆಯಲ್ಲಿ ಹಾಸಿಗೆಗಳ ಶುಚಿತ್ವವನ್ನು ಕಾಪಾಡುತ್ತಿಲ್ಲ. ಮಳೆಗಾಲ ಆದ್ದರಿಂದ ಬಟ್ಟೆಗಳು ಒಣಗುವುದಿಲ್ಲ. ಆಸ್ಪತ್ರೆಗೆ ಬಟ್ಟೆ ಒಣಗಿಸಲು ಡ್ರೆöÊಯರ್ ಯಂತ್ರವನ್ನು ಖರೀದಿಸಬೇಕೆಂದು ಸಮಿತಿ ಸದಸ್ಯರಾದ ಕೆ.ಪಿ.ರವೀಶ್ ಮನವಿ ಮಾಡಿದರು. ನೂತನ ಡ್ರೆöÊಯರ್ ಯಂತ್ರವನ್ನು ಖರೀದಿಸಲು ಕೊಟೇಶನ್ ಆಹ್ವಾನಿಸಲು ತಾಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್ ಅವರಿಗೆ ಶಾಸಕರು ಸೂಚನೆ ನೀಡಿದರು.

ಸರಕಾರದಿಂದ ವಿತರಣೆ ಆಗುವ ಎಲ್ಲಾ ಔಷಧಿ ಹಾಗೂ ಮಾತ್ರೆಯನ್ನು ಆಸ್ಪತ್ರೆಯಲ್ಲಿಯೇ ವಿತರಿಸಬೇಕು. ಅನಗತ್ಯವಾಗಿ ಹೊರಗಿನ ಔಷಧಾಲಯಕ್ಕೆ ಚೀಟಿ ಬರೆದು ಕೊಡಬಾರದು ಎಂದು ವೈದ್ಯರಿಗೆ ಶಾಸಕರು ಸೂಚನೆ ನೀಡಿದರು.

ಸಾರ್ವಜನಿಕರು ಆಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ರಕ್ತ ಪರೀಕ್ಷೆಯನ್ನು ಮಾಡಲು ವೈದ್ಯರು ಸೂಚಿಸಬೇಕು. ಆಸ್ಪತ್ರೆಯ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಯಾರೂ ಖಾಸಗಿ ಪ್ರಯೋಗಾಲಯ ನಡೆಸಬಾರದು ಎಂದು ಸರಕಾರದ ಆದೇಶ ಇದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈದ್ಯರುಗಳು ಕಮಿಷನ್ ಆಸೆಗೆ ಬೀಳಬಾರದು ಎಂದು ಶಾಸಕರು ಹೇಳಿದರು.

ಇದೇ ಸಂದರ್ಭ ಶಸ್ತçಚಿಕಿತ್ಸಾ ವಿಭಾಗಕ್ಕೆ ಅರೆವಳಿಕೆ ಯಂತ್ರ ಖರೀದಿಸಲು, ಎನ್‌ಬಿಎಸ್‌ಯು ವಿಭಾಗಕ್ಕೆ ೧೦ ಸಾವಿರ ರೂ.ವೆಚ್ಚದಲ್ಲಿ ಅಗತ್ಯವಿರುವ ಔಷಧ ಮತ್ತು ಉಪಕರಣ ಖರೀದಿ, ತುರ್ತು ಔಷಧ ಮತ್ತು ರಾಸಾಯನಿಕಗಳ ಖರೀದಿ, ಕ್ಷಕಿರಣ ಯಂತ್ರೋಪಕರಣಗಳ ಬ್ಯಾಟರಿ ದುರಸ್ತಿ, ಜನರೇಟರ್‌ಗೆ ಅಗತ್ಯವಿರುವ ಸಾಮಗ್ರಿ, ಕಛೇರಿಗೆ ಕಂಪ್ಯೂಟರ್, ರಕ್ತನಿಧಿ ಘಟಕದ ಯಂತ್ರೋಪಕರಣಗಳ ಸರ್ವಿಸ್‌ಗಾಗಿ ಅನುದಾನ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್, ಆಡಳಿತ ವೈದ್ಯಾಧಿಕಾರಿಗಳು, ಆರೋಗ್ಯ ರಕ್ಷಾ ಸಮಿತಿಯ ಪದಾಧಿಕಾರಿಗಳಾದ ಎಸ್.ಬಿ. ಸುರೇಂದ್ರ, ಎನ್.ಎನ್.ರಮೇಶ್, ಸೈಮನ್, ಹೆಚ್.ಕೆ.ಲೋಕೇಶ್, ಜೆ.ಜೆ. ರಮೇಶ್, ಹಣಕೋಡು ಮಹೇಶ್, ಮಂಜುಳಾ ಹರೀಶ್, ತಾ.ಪಂ. ಪ್ರಬಾರ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.