ಸೋಮವಾರಪೇಟೆ, ಜು. ೮: ಮುಖ್ಯಮಂತ್ರಿಗಳ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೋಮವಾರಪೇಟೆ ಹೈಟೆಕ್ ಮಾರುಕಟ್ಟೆಗೆ ತೆರಳುವ ರಸ್ತೆ ಕೆಸರಿನ ಕೊಂಪೆಯಾಗಿದೆ.

ವಾರದ ಸೋಮವಾರದಂದು ಮಾರುಕಟ್ಟೆಯಲ್ಲಿ ಸಂತೆ ವ್ಯಾಪಾರ ನಡೆಯುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಸಾವಿರಾರು ಗ್ರಾಹಕರು ಆಗಮಿಸುತ್ತಾರೆ. ಕ್ಲಬ್ ರಸ್ತೆಯಿಂದ ಪ.ಪಂ. ವಾಣಿಜ್ಯ ಮಳಿಗೆಯ ಒಳಭಾಗದ ಮೂಲಕ ಮಾರುಕಟ್ಟೆಗೆ ತೆರಳುವ ಸ್ಥಳ ಕೆಸರಿನ ಕೊಂಪೆಯಾಗಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಈ ಸ್ಥಳದಲ್ಲಿ ಮಣ್ಣು ಹಾಕಿರುವುದರಿಂದ ಮಳೆ ನೀರು ಸುರಿದು ಇಡೀ ಆವರಣ ಕೆಸರುಮಯವಾಗಿದೆ. ಮಾರುಕಟ್ಟೆಗೆ ತೆರಳುವವರು, ವಾಪಸ್ ಆಗುವವರು ಹಲವು ಬಾರಿ ಬಿದ್ದು ಎದ್ದಿದ್ದಾರೆ. ಕೆಸರಿನ ಕೊಂಪೆಯ ಪ್ರದೇಶವಾಗಿ ಮಾರ್ಪಟ್ಟಿದ್ದರೂ ಪಟ್ಟಣ ಪಂಚಾಯಿತಿ ನಿರ್ಲಕ್ಷö್ಯ ವಹಿಸಿದೆ. ತಕ್ಷಣ ಈ ಬಗ್ಗೆ ಗಮನ ಹರಿಸಿ ಕೆಸರಿನಿಂದ ಮುಕ್ತಿ ನೀಡಬೇಕೆಂದು ಗ್ರಾಹಕರು ಪತ್ರಿಕೆಯೊಂದಿಗೆ ಆಗ್ರಹಿಸಿದ್ದಾರೆ.