ಸೋಮವಾರಪೇಟೆ, ಜು. ೮: ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರ ಬೇಕು. ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ತಮ್ಮ ಕೊಡುಗೆ ನೀಡಬೇಕು ಎಂದು ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಅಭಿಪ್ರಾಯಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಇವತ್ತಿನಿಂದಲೇ ಮೊಬೈಲ್ ಗೀಳಿನಿಂದ ಹೊರಬಂದರೆ ಸಾಧನೆಯ ಮೆಟ್ಟಿಲು ಏರಬಹುದು. ಮುಂದೆ ದ್ವಿತೀಯ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೆ ವೈಯುಕ್ತಿವಾಗಿ ಐದು ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡುತ್ತೇನೆ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಪುಟ್ಟರಾಜು ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯೆಗೆ ಬಡವ ಶ್ರೀಮಂತ ಎಂಬ ಭೇದಭಾವವಿಲ್ಲ. ಸತತ ಪರಿಶ್ರಮದಿಂದ ಮಾತ್ರ ಶೈಕ್ಷಣಿಕ ಸಾಧನೆ ಮಾಡಬಹುದು ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಎ.ಲಾರೇನ್ಸ್ ಮಾತನಾಡಿ, ಕಾಲೇಜಿನಲ್ಲಿ ‘ಆಸರೆ’ ಯೋಜನೆ ಜಾರಿಯಲ್ಲಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಪದವಿ ವ್ಯಾಸಂಗಕ್ಕೆ ಪ್ರತಿ ವರ್ಷ ೫ ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರಸಕ್ತ ೧೧ ವಿದ್ಯಾರ್ಥಿಗಳು ಅಸರೆ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ದಾನಿಗಳ ಸಹಕಾರದಿಂದ ‘ಆಸರೆ’ ಪ್ರತಿಭಾವಂತರಿಗೆ ಆಸರೆಯಾಗಿದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ತಿಮ್ಮಯ್ಯ, ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ನಂದಕುಮಾರ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲೀಪ್‌ವಾಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಟಿ.ಅರ್ಜುನ್, ಹಿರಿಯ ಉಪನ್ಯಾಸಕರಾದ ಬಿ.ಬಿ.ಲಿಲಿತಾ, ಹೇಮಕುಮಾರ್ ಇದ್ದರು.