ಗೋಣಿಕೊಪ್ಪಲು, ಜು.೮: ದೈನಂದಿನ ಕೂಲಿ ಕೆಲಸಕ್ಕೆ ತೆರಳಿ ತನ್ನ ಮನೆಯ ಕಡೆ ಹೆಜ್ಜೆ ಹಾಕುತ್ತಾ ಬರುತ್ತಿದ್ದ ವೇಳೆ ದಿಢೀರನೆ ಎದುರಾದ ಕಾಡಾನೆ ಕಾರ್ಮಿಕ ಮಹಿಳೆಯ ಮೇಲೆ ದಾಳಿ ಮಾಡಿ ಸ್ಥಳದಲ್ಲೇ ಕೊಂದು ಹಾಕಿದ ಘಟನೆ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಕಾಡು ಪೈಸಾರಿಯಲ್ಲಿ ನಡೆದಿದೆ. ಕಾರ್ಮಿಕ ಮಹಿಳೆ ಗೌರಿ (೬೫) ಮೃತಪಟ್ಟಿದ್ದಾಳೆ.

ಸಂಜೆ ಆರು ಗಂಟೆಯ ಸುಮಾರಿಗೆ ಎಂದಿನAತೆ ಕೂಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಗೌರಿ ಸಣ್ಣದಾಗಿ ಬೀಳುತ್ತಿದ್ದ ಮಳೆಯ ನಡುವೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ.

ನಂತರ ವಿಷಯ ತಿಳಿದ ನಾಗರಿಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕಾರ್ಯದರ್ಶಿ ಎ.ಜೆ. ಬಾಬು, ದೇವರಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಬಸಂತ್ ಕುಮಾರ್, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಅಪ್ರೋಸ್ ಸ್ಥಳಕ್ಕೆ ತೆರಳಿ ಮೃತ

(ಮೊದಲ ಪುಟದಿಂದ) ದೇಹವನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಗೆ ಕೈ ಜೋಡಿಸಿದರು.

ಕತ್ತಲೆ ಆವರಿಸಿದ ಹಿನ್ನೆಲೆಯಲ್ಲಿ ಕಾಡಾನೆಗಳ ಭಯದ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರು ರಾತ್ರಿ ೮ ಗಂಟೆಯ ಸಮಯದಲ್ಲಿ ಆ್ಯಂಬ್ಯುಲೆನ್ಸ್ ಮೂಲಕ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿದರು.

ತಿತಿಮತಿ ಎಸಿಎಫ್ ಗೋಪಾಲ್, ಆರ್‌ಎಫ್‌ಓ ಗಂಗಾಧರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಮಹಿಳೆ ಗೌರಿ ತನ್ನ ಪತಿ ಚಂದ್ರ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಬಂಧುಗಳ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಸಂಚಾರವಿದ್ದು ಭಯದ ವಾತಾವರಣದಲ್ಲಿ ದಿನ ಕಳೆಯಬೇಕಾಗಿದೆ.

ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಠಾಣಾಧಿಕಾರಿ ರೂಪಾದೇವಿ ಬೀರಾದರ್, ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. - ಹೆಚ್.ಕೆ.ಜಗದೀಶ್