ಕಣಿವೆ, ಜು. ೮: ಕಳೆದ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಬಿತ್ತನೆಗೈದಿದ್ದ ಇದೀಗ ೧೮ ತಿಂಗಳ ಅವಧಿ ಕಳೆದ ಹಳೆಯ ಶುಂಠಿ ೫,೫೦೦ ರೂ. ಗಳಿಗೆ ಮಾರಾಟವಾಗುತ್ತಿದೆ.

೬೦ ಕೆಜಿ ತೂಕವುಳ್ಳ ಚೀಲವೊಂದರ ಶುಂಠಿಗೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಅರ್ಧದಷ್ಟು ದರ ಕುಸಿತವಾಗಿದೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಒಂದೂವರೆ ವರ್ಷ ಅವಧಿ ತುಂಬಿದ ಶುಂಠಿ ಫಸಲಿಗೆ ಚೀಲವೊಂದಕ್ಕೆ ೧೦,೫೦೦ ರೂಗಳಿತ್ತು.

ಇದೀಗ ದರ ಕುಸಿತಗೊಂಡಿದ್ದು ರೂ. ೫,೫೦೦ ಆಗಿದೆ. ಈ ಬಾರಿಯ ಶುಂಠಿ ಬೆಳೆಗಾರರನ್ನು ಸಂಕಟಕ್ಕೆ ದೂಡಿದಂತಾಗಿದೆ. ಈ ಬಾರಿ ಹೊಸ ಶುಂಠಿಗೆ ಇನ್ನೂ ಕೂಡ ನಿಖರವಾದ ದರ ನಿಗದಿಯಾಗಿಲ್ಲ.

ಹಾಗಾಗಿ ಹಳೆಯ ಶುಂಠಿಯ ದರ ಮಾತ್ರ ಕುಸಿತ ಕಂಡಿದೆ. ಹಳೆಯ ಶುಂಠಿಯ ಫಸಲು ಖಾಲಿಯಾದಲ್ಲಿ ಮಾತ್ರ ಹೊಸ ಶುಂಠಿಗೆ ದರ ನಿಗದಿಯಾಗುತ್ತದೆ. ಇದರಿಂದಾಗಿ ಈ ಬಾರಿ ಶುಂಠಿ ಬೆಳೆದ ಬಹಳಷ್ಟು ಮಂದಿ ಆತಂಕಕ್ಕೊಳಗಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಿನ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಬಿತ್ತನೆ ಮಾಡಿದ್ದ ಶುಂಠಿಗೆ ಚೀಲವೊಂದಕ್ಕೆ ೬.೫೦೦ ರೂ. ವ್ಯಯಿಸಿ ಬಿತ್ತನೆ ಮಾಡಲಾಗಿತ್ತು.

ಹಾಗೆಯೇ ಶುಂಠಿಯ ಭೂಮಿಯ ದರವೂ ದುಪ್ಪಟ್ಟಾಗಿತ್ತು. ಅಲ್ಲದೇ ಕಾರ್ಮಿಕರ ವೇತನವೂ ಸೇರಿದಂತೆ ಎಲ್ಲಾ ಬೆಲೆಗಳು ಏರಿಕೆಯಾಗಿದ್ದರಿಂದ ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ೪.೫೦ ಲಕ್ಷ ರೂ.ಗಳಿಂದ ೫ ಲಕ್ಷ ರೂ.ಗಳವರೆಗೂ ಹಣ ಖರ್ಚಾಗಿತ್ತು. ಇದೀಗ ಹಳೆಯ ಶುಂಠಿಯ ಫಸಲಿಗೆ ದರ ಇಳಿಕೆಯಾದ ಸಂಗತಿ ಶುಂಠಿಯ ಹೊಸ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. -ಕೆ. ಎಸ್. ಮೂರ್ತಿ