ಕಣಿವೆ, ಜು. ೮: ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗುವ ಸನ್ನಿಹಿತದಲ್ಲಿದೆ.

ಈ ಬಾರಿ ಮುಂಗಾರು ಕೂಡ ಆಶಾದಾಯಕವಾಗಿರುವುದರಿಂದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಭತ್ತದ ಸಸಿಮಡಿಗಳ ತಯಾರಿಯಲ್ಲಿ ತೊಡಗಿದ್ದಾರೆ. ಈಗಾಗಲೇ ತೊರೆನೂರು, ಶಿರಂಗಾಲ, ಹೆಬ್ಬಾಲೆ ವ್ಯಾಪ್ತಿಯ , ಕಣಿವೆ ಮೊದಲಾದ ಗ್ರಾಮಗಳ ಅಚ್ಚುಕಟ್ಟು ರೈತರು ಭತ್ತದ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಭತ್ತದ ಫಸಲಿಗೆ ದರ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ದರವೂ ಏರಿಕೆಯಾಗಿದೆ. ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರಾಜಭೋಗ, ರಾಜಮುಡಿ, ಸೌಭಾಗ್ಯ, ಸಣ್ಣ ಮಧು ಮೊದಲಾದ ತಳಿಯ ಭತ್ತದ ಬೀಜಗಳ ಬಿತ್ತನೆಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.

ಹಾರAಗಿ ಜಲಾಶಯಕ್ಕೆ ಈ ಬಾರಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಗರಿಷ್ಠ ನೀರು ಹರಿದು ಬಂದಿದೆ.

ಇದೀಗ ಜಲಾಶಯದಲ್ಲಿ ೨೮೪೫ ಅಡಿಗಳಷ್ಟು ನೀರು ಸಂಗ್ರಹವಿದ್ದು, ಜುಲೈ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದ್ದು, ಜಲಾಶಯದಿಂದ ಜುಲೈ ಮಾಸಾಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಾಲೆಗಳಿಗೆ ನೀರು ಹರಿಸುವ ಸಂಬAಧ ಸದ್ಯದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸುವುದಾಗಿ ಹಾರಂಗಿ ಜಲಾಶಯದ ಪ್ರಬಾರ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ‘ಶಕ್ತಿ’ ಗೆ ತಿಳಿಸಿದರು.