ವೀರಾಜಪೇಟೆ, ಜು. ೮ : ಹಿಂದೂ ಮಲಯಾಳಿ ಅಸೋಸಿಯೇಷನ್ ಅಧೀನದಲ್ಲಿ ಹಿಂದೂ ಮಲಯಾಳಿಗಳಿಗೆ ಸೀಮಿತವಾಗಿ ಆಶ್ರಯ ಮರಣ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ವೀರಾಜಪೇಟೆ ನಗರ ಹಾಗೂ ಸುತ್ತಮುತ್ತ ಗ್ರಾಮದ ಹಿಂದೂ ಮಲಯಾಳಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅಸೋಸಿಯೇಷನ್ ಅಧ್ಯಕ್ಷ ವಿನುಪ್ ಕುಮಾರ್ ಹೇಳಿದರು.

ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತ ಸುಮಾರು ೧೦ ಸಾವಿರಕ್ಕೂ ಅಧಿಕ ಹಿಂದೂ ಮಲಯಾಳಿ ಜನಾಂಗದವರಿದ್ದಾರೆ. ಶೇ. ೮೦ ರಷ್ಟು ಕಡುಬಡವರು ಹಾಗೂ ಮಧ್ಯಮ ವರ್ಗದವರಾಗಿದ್ದಾರೆ. ಕುಟುಂಬ ನಿರ್ವಹಿಸುವವರು ಮೃತಪಟ್ಟರೆ ಅಂತ್ಯಕ್ರಿಯೆ ಸಂದÀರ್ಭ ಸಮಸ್ಯೆಗಳು ಉಂಟಾಗುವುದು ಸಹಜವಾಗಿರುವುದರಿಂದ ಅಂತವರಿಗೆ ನೆರವಾಗಲು ಆಶ್ರಯ ಮರಣ ನಿಧಿ ಯೋಜನೆ ಉಪಯೋಗವಾಗುತ್ತದೆ. ಆಶ್ರಯ ಮರಣ ನಿಧಿ ಯೋಜನೆ ಉಪಯೋಗ ಪಡೆದುಕೊಳ್ಳುವವರು ನಮ್ಮ ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯದರ್ಶಿ ಶಾಜಿ ಮೋಹನ್ ಮಾತನಾಡಿ, ಆಶ್ರಯ ಮರಣ ನಿಧಿ ಯೋಜನೆಗೆ ಸೇರಲು ಇಚ್ಚಿಸುವವರು ೫೦೦ ರೂಗಳನ್ನು ಪಾವತಿಸಿ ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದುಕೊಂಡ ಸದಸ್ಯರು ಮರಣ ಹೊಂದಿದಲ್ಲಿ ನಾಮಿನಿಗೆ ಹಣ ನೀಡಲಾಗುವುದು. ಯಾವುದೇ ಸದಸ್ಯರು ಮರಣ ಹೊಂದಿದ್ದಲ್ಲಿ ಉಳಿದ ಎಲ್ಲಾ ಸದಸ್ಯರು ೧೦೦ ರೂಗಳನ್ನು ಮರಣ ನಿಧಿಗೆ ೩ ದಿನದೊಳಗೆ ಪಾವತಿಸಬೇಕು. ಅಸ್ವಾಭಾವಿಕವಾಗಿ ಮರಣ ಹೊಂದಿದ್ದಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ತೀರ್ಮಾನದಂತೆ ನಿರ್ಣಯ ಕೈಗೊಳ್ಳಲಾಗುವುದು. ಉಳಿದಂತೆ ಹಲವು ನಿಬಂಧನೆಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷರು ೯೮೪೫೮೪೫೦೫೬, ಖಜಾಂಚಿ ೯೯೦೨೩೧೮೨೦೫ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಖಜಾಂಚಿ ಡಿ.ಕೆ. ಸುನಿಲ್ ರಾಜ್, ಚೈತನ್ಯ ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ಪುಷ್ಪರಾಜ್, ಸಲಹೆಗಾರ ಸುರೇಶ್‌ಕುಮಾರ್ ಉಪಸ್ಥಿತರಿದ್ದರು.