ಶನಿವಾರಸಂತೆ, ಜು. ೮: ಶಾಲಾ ವಿದ್ಯಾರ್ಥಿ ಸಂಘದ ನಾಯಕರಾಗಿ ಆಯ್ಕೆಯಾಗುವ ವಿದ್ಯಾರ್ಥಿಗಳು ಶಿಸ್ತು ಮತ್ತು ಆತ್ಮ ವಿಶ್ವಾಸವುಳ್ಳವರಾಗಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದು ಪತ್ರಕರ್ತ ಪಾಸ್ಟರ್ ಫ್ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆಯ ಸೇಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ನಾಯಕರಿಗೆ ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮಾಜಿ ರಾಷ್ಟçಪತಿ ಡಾ.ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯನ್ನು ಆದರ್ಶವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಯುಷ್ಮಾನ್, ಉಪಾಧ್ಯಕ್ಷೆ ನಫೀಸತ್ ಹಯಾ, ಕಾರ್ಯದರ್ಶಿ ಆಶ್ರಿತಾ, ಶಿಸ್ತು ನಾಯಕರಾದ ಪೂರ್ವ, ತಯ್ಯಬ್, ಅಫೀಫ್, ದರ್ಶನ್, ಸೂರಜ್, ಧನುಷ್, ಪ್ರಣವ್ ಅಸ್ನ ಅವರುಗಳಿಗೆ ಹಾಗೂ ಪಠ್ಯೇತರ ಚಟುವಟಿಕೆಗಳ ಅಭಿವೃದ್ಧಿಗಾಗಿ ರಚಿಸಿದ ೪ ಹೌಸ್ ಗುಂಪುಗಳ ನಾಯಕರುಗಳಿಗೆ ಬ್ಯಾಡ್ಜ್ ವಿತರಿಸಲಾಯಿತು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಾಲಾ ವ್ಯವಸ್ಥಾಪಕಿ ಸಿಸ್ಟರ್ ಲೂಸಿ ಜೋಸೆಫ್, ಮುಖ್ಯ ಶಿಕ್ಷಕಿ ಸಿಸ್ಟರ್ ಸಂಗೀತ ದೊಡ್ಡಮನಿ, ಸಿಸ್ಟರ್ ಹಿಲ್ಡಾಮೇರಿ, ಸಿಸ್ಟರ್ ಎಲಿಜಬೆತ್ ಇತರ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.