ಕುಶಾಲನಗರ, ಜು.೯: ಯಾವುದೇ ಸಮಸ್ಯೆಗಳನ್ನು ಹೆಚ್ಚಾಗಿ ಪ್ರತಿಬಿಂಬಿಸುವುದಕ್ಕಿAತ ಅವುಗಳ ಪರಿಹಾರದ ಕಡೆಗೆ ಹೆಚ್ಚು ಆದ್ಯತೆ ಕೊಡುವ ವರದಿಗಳನ್ನು ಮಾಡುವುದು ಹೆಚ್ಚು ಸಮಾಜಮುಖಿಯಾದ ಕೆಲಸವಾಗುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕ ಹಾಗೂ ಕೊಡಗು ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ವಿಶ್ವ ವಿದ್ಯಾಲಯದ ಜ್ಞಾನಕಾವೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಜ್ಞಾನಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ನಾಲ್ಕು ಆಧಾರಗಳೆನಿಸಿದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ವಿಶೇಷವಾಗಿ ಪತ್ರಿಕಾ ರಂಗ ಸಮಾಜದ ಆಗುಹೋಗುಗಳನ್ನು ವಿಭಿನ್ನತೆಯಿಂದ ನೋಡಿ ಸ್ಪಷ್ಟತೆಯಿಂದ ವರದಿ ಮಾಡಬೇಕೆಂದು ಸಲಹೆ ನೀಡಿದರು.
ಕೊಡಗಿನ ಪತ್ರಕರ್ತರು ಪ್ರಾಮಾಣಿಕತೆ, ಅಧ್ಯಯನಶೀಲತೆ ಮತ್ತು ಸ್ಪಷ್ಟತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲೂ ಈ ಪರಂಪರೆ ಮುಂದುವರೆಯಲಿ ಎಂದು ಆಶಿಸಿ, ಕೊಡಗು ವಿಶ್ವ ವಿದ್ಯಾಲಯದಲ್ಲಿ ವಿಜ್ಞಾನ ವಿಷಯಗಳ ಮತ್ತು ಇತ್ತೀಚಿನ ಸಂಶೋಧನೆಗಳ ಕುರಿತು ವರದಿಗಾರಿಕೆಯ ಬಗ್ಗೆ ವಿಶೇಷ ಕಾರ್ಯಾಗಾರ ಆಯೋಜಿಸುವುದಾಗಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ವಿಶ್ವ ವಿದ್ಯಾಲಯದಲ್ಲಿ ಬಿ.ಸಿ.ಎ, ಎಂ.ಸಿ.ಎ ಹಾಗೂ ಎಂ.ಬಿ.ಎ ನೂತನ ಕೋರ್ಸ್ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಮಾತನಾಡಿ, ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಕೊಡಗಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವ ಪತ್ರಕರ್ತರ ಪಡೆಯೇ ಇರುವುದು ಹೆಮ್ಮೆಯ ವಿಚಾರ. ಯಾವುದೇ ವಿಷಯವನ್ನು ಅಥವಾ ಸರ್ಕಾರವನ್ನು ಉಳಿಸುವ ಇಲ್ಲವೇ ಅಳಿಸುವ ಶಕ್ತಿಯನ್ನು ಪತ್ರಕರ್ತರ ಲೇಖನಿ ಹೊಂದಿದೆ ಎಂದು ಅವರು ವಿಶ್ಲೇಷಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರು ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಸಮಾಜದ ಅಂಕು-ಡೊAಕುಗಳನ್ನು ತಿದ್ದುವ ಹಾಗೂ ಸತ್ಯವನ್ನು ಜನರ ಮುಂದಿಡುವ ಪತ್ರಕರ್ತರಿಗೆ ಕಾನೂನಿನ ರಕ್ಷಣೆ ಇಲ್ಲ. ಪತ್ರಿಕಾ ವೃತ್ತಿ ಹಿಂದೆAದಿಗಿAತಲೂ ಹೆಚ್ಚು ಸವಾಲಿನಂತಾಗಿದ್ದು, ಇತ್ತೀಚೆಗೆ ತಾಂತ್ರಿಕತೆ ಬೆಳೆದಿರುವ ಹಿನ್ನೆಲೆಯಲ್ಲಿ ಮುದ್ರಣಾ ಮಾಧ್ಯಮಕ್ಕೆ ಪೆಟ್ಟು ಬೀಳುವ ಆತಂಕ ಎದುರಾಗಿದೆ ಎಂದು ಹೇಳಿದರು.
ಜೂನಿಯರ್ ಅಲೂಮಿನಿ ಕ್ಲಬ್‌ನ ವಲಯಾಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆ ಹಾಗೂ ಸಹಾಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಕೊಡಗಿನಲ್ಲಿ ವಿಶ್ವವಿದ್ಯಾಲಯ ಆರಂಭಗೊAಡಿರುವುದು ಹೆಮ್ಮೆಯ ವಿಚಾರ. ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪದವಿ ಕಾಲೇಜುಗಳಿಗೆ ಅವಕಾಶ ಕಷ್ಟವಿತ್ತು. ಆದರೆ ಈಗ ಕೊಡಗಿನಲ್ಲೇ ಉನ್ನತ ಶಿಕ್ಷಣ ದೊರಕುತ್ತಿರುವುದು ಹರ್ಷದಾಯಕ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುಲಿಯಂಡ ರಾಮ್ ದೇವಯ್ಯ ಅವರು ತಮ್ಮ ಜ್ಞಾನಗಂಗಾ ಶಾಲೆಯ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಹೊಸ ದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಕೆ. ತಿಮ್ಮಪ್ಪ ಅವರಿಗೆ ಪ್ರದಾನ ಮಾಡಲಾಯಿತು. ವಿದ್ಯಾರ್ಥಿ ಅಮೃತ್‌ರಾಜ್ ಪ್ರಾರ್ಥಿಸಿದರು. ಕೊಡಗು ಜಿಲ್ಲಾ ಸಂಘದ ನಿರ್ದೇಶಕ ಡಿ.ಪಿ. ಲೋಕೇಶ್ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಜಮೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಸಂಘದ ಖಜಾಂಚಿ ನವೀನ್ ಕುಮಾರ್ ವಂದಿಸಿದರು.