ಮಡಿಕೇರಿ, ಜು. ೯: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿಗಳ ಉಪಟಳದ್ದೇ ಸುದ್ದಿ. ಆನೆ, ಹುಲಿ, ಚಿರತೆ, ಕಾಡುಕೋಣ, ಕಾಡು ಹಂದಿಗಳು, ಮಂಗಗಳ ಉಪಟಳ ಈ ರೀತಿಯಾಗಿ ವಿವಿಧ ವನ್ಯಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಲಗ್ಗೆ ಹಾಕುತ್ತಿವೆ. ರೈತರ ಬೆಳೆಗಳು ನಾಶವಾಗುತ್ತಿರುವುದಲ್ಲದೆ ಜನರು ಆತಂಕದ ನಡುವೆ ಬದುಕುವಂತಾಗಿದೆ.
ಇದರ ನಡುವೆ ಇದೀಗ ಹೊಸತೊಂದು ಸಮಸ್ಯೆಯೂ ವರದಿಯಾಗಿದೆ. ಆದರೆ ಇದು ವನ್ಯಪ್ರಾಣಿಯಿಂದಲ್ಲ... ಸಾಕು ಪ್ರಾಣಿ ಎಂಬುದು ವಿಶೇಷ. ಈ ಸಮಸ್ಯೆ ಎದುರಾಗಿರುವುದು ಗ್ರಾಮೀಣ ಭಾಗವಾದ ಗರ್ವಾಲೆ ಗ್ರಾಮದ ವ್ಯಾಪ್ತಿಯಲ್ಲಿ.
ಇಲ್ಲಿಗೆ ಕಳೆದ ಎರಡು ತಿಂಗಳ ಹಿಂದೆ ಎಲ್ಲಿಂದಲೋ ಬಂದ ಕುದುರೆಯೊಂದು ಸೇರಿಕೊಂಡಿದೆ. ಪ್ರಾರಂಭದಲ್ಲಿ ಅದರ ಪಾಡಿಗೆ ಅದು ತಿರುಗಾಡಿಕೊಂಡಿತ್ತು. ಇದೀಗ ಈ ಕುದುರೆ ಲಂಗು - ಲಗಾಮು ಇಲ್ಲದೆ ಗ್ರಾಮ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದು, ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಅಲ್ಲಿನ ಮನೆ - ಮನೆಗಳಿಗೆ ಧಾವಿಸಿ ಬರುತ್ತಿರುವ ಈ ಕಂದು ಮಿಶ್ರಿತ ಬಿಳಿ ಬಣ್ಣದ ಕುದುರೆ, ಮನೆಯಂಗಳದಲ್ಲಿನ, ಹೂ ಗಿಡಗಳು, ಹೂ ಕುಂಡಗಳನ್ನು ನಾಶ ಮಾಡುತ್ತಿವೆ. ನಿಲ್ಲಿಸಿರುವ ದ್ವಿಚಕ್ರವಾಹನಗಳನ್ನು ಬೀಳಿಸುವುದು, ಗೊಬ್ಬರ ಇತ್ಯಾದಿ ಸಂಗ್ರಹವನ್ನು ಚೆಲ್ಲಾಪಿಲ್ಲಿ ಮಾಡುವುದು, ವಾಹನಗಳ ಸೀಟ್ಗಳನ್ನು ಕಚ್ಚುವುದು. ಇಂತಹ ಕೀಟಲೆಯೊಂದಿಗೆ ಕಿರಿಕಿರಿ ಮಾಡುತ್ತಿದೆ ಎನ್ನಲಾಗಿದೆ.
ಇದರೊಂದಿಗೆ ಈಗೀಗ ಶಾಲಾ ಮಕ್ಕಳನ್ನು ಬೆರೆಸುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಈ ಬಗ್ಗೆ ಕೆಲವರು ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಅವರು ಪಂಚಾಯಿತಿಗೆ ತಿಳಿಸಿ ಅಂದಿದ್ದಾರೆ. ಪಂಚಾಯಿತಿಯವರಿಗೆ ಹೇಳಿದರೆ, ಅರಣ್ಯ ಇಲಾಖೆಗೆ ತಿಳಿಸುವಂತೆ ಸೂಚನೆ ಬಂದಿದೆ. ಅರಣ್ಯ ಇಲಾಖೆಯವರು ಇದು ವನ್ಯಪ್ರಾಣಿ ಅಲ್ಲ... ಸಾಕುಪ್ರಾಣಿ ನಾವೇನು ಮಾಡಲಾಗದು ಎನ್ನುತ್ತಿದ್ದಾರಂತೆ... ಈ ಎಲ್ಲಾ ಗೊಂದಲಗಳ ನಡುವೆ ಈ ‘ಅಶ್ವ’ದ ತಿರುಗಾಟ... ನಿರಂತರವಾಗಿದೆ. ಇದು ಎಲ್ಲಿಂದ ಬಂತು - ಯಾರು ಬಿಟ್ಟರು ಎಂಬ ಮಾಹಿತಿ ಇಲ್ಲ. ಇದನ್ನು ಕಟ್ಟಿಹಾಕುವವರು ಯಾರು ಎಂಬ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ. -ಶಶಿ ಸೋಮಯ್ಯ