ಮಡಿಕೇರಿ, ಜು ೯. : ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೆಚ್ಚು ಗೊಳಿಸುವ ಮೂಲಕ ಪರಿಷತ್ತನ್ನು ಗಟ್ಟಿಗೊಳಿಸಬೇಕಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಇತ್ತೀಚಿಗೆ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನುಡಿದರು.

ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೋಂದಾಯಿಸಲಾಗಿದೆ. ಈ ವರ್ಷದ ಕೊನೆಯೊಳಗಾಗಿ ೧೦,೦೦೦ ಸದಸ್ಯರನ್ನು ಹೊಂದುವ ಗುರಿ ಹೊಂದಿದ್ದು ಎಲ್ಲರೂ ಸಹಕರಿಸಬೇಕು ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರುಗಳು ಒಂದಾಗಿ ಎಲ್ಲಾ ಶಾಲೆ ಕಾಲೇಜುಗಳನ್ನು ಭೇಟಿಯಾಗಿ ಸದಸ್ಯತ್ವವನ್ನು ಅಭಿಯಾನದ ರೀತಿಯಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಪರಿಷತ್ತಿನಲ್ಲಿ ಈ ವರ್ಷ ೩೫ ದತ್ತಿನಿಧಿ ಕಾರ್ಯಕ್ರಮಗಳಿದ್ದು ಅವನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಮೂಲಕ ಕನ್ನಡ ನಾಡು ನುಡಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಕಾರ್ಯಕಾರಿ ಸಮಿತಿಯ ಲೆಕ್ಕ ಪರಿಶೋಧನಾ ಸಲಹಾಕಾರ ಸಂಜೀವ್ ಜೋಶಿ ಮಾತನಾಡಿ ಪರಿಷತ್ತಿನ ಲೆಕ್ಕಪತ್ರ ವ್ಯವಸ್ಥಿತವಾಗಿ ನಿರ್ವಹಿಸುವ ಕುರಿತು ತಾಲೂಕು ಹೋಬಳಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಅವರಿಗೆ ಮಾಹಿತಿ ನೀಡಿದರು.

ಸದಸ್ಯರ ಪಟ್ಟಿಯಿಂದ ಮೃತಪಟ್ಟಿರುವ ಸದಸ್ಯರುಗಳ ಹೆಸರುಗಳನ್ನು ಈಗಾಗಲೇ ಗುರುತಿಸಿ ಕೇಂದ್ರಕ್ಕೆ ಕಳುಹಿಸಿದ್ದು, ಮುಂದಿನ ಚುನಾವಣೆ ಸಂದರ್ಭದಲ್ಲಿ ಆ ಸದಸ್ಯರ ಹೆಸರನ್ನು ಚುನಾವಣಾ ಪಟ್ಟಿಯಿಂದ ತೆಗೆಯುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ಮಾಹಿತಿಯಿತ್ತರು.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಸ್‌ಐ ಮುನೀರ್ ಅಹಮದ್, ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಆರ್.ಪಿ ಚಂದ್ರಶೇಖರ್, ಜಲಜ ಶೇಖರ್, ಸಹ ಕಾರ್ಯದರ್ಶಿ ಎ.ವಿ. ಮಂಜುನಾಥ್, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ಶ್ರೀಮಂಗಲ ಹೋಬಳಿ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಮೂರ್ನಾಡು ಹೋಬಳಿ ಅಧ್ಯಕ್ಷೆ ಈರಮಂಡ ಹರಿಣಿ, ಸಿದ್ದಾಪುರ ಹೋಬಳಿ ಅಧ್ಯಕ್ಷ ಟಿ.ಎಚ್ ಮಂಜುನಾಥ್, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್ ನಾಗರಾಜ್, ಪೊನ್ನಂಪೇಟೆ ಹೋಬಳಿ ಖಜಾಂಜಿ ಚಂದನ್ ಕಾಮತ್ ಉಪಸ್ಥಿತರಿದ್ದರು.