ಸೋಮವಾರಪೇಟೆ, ಜು.೯: ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿ ದೇಶ ಮಿಂದೆದ್ದಿದೆ. ವಿಶ್ವದ ಅಭಿವೃದ್ಧಿ ಶೀಲ ರಾಷ್ಟçಗಳ ಪಟ್ಟಿಯಲ್ಲಿ ೫ನೇ ಸ್ಥಾನ ದೊಳಗೆ ಭಾರತ ಅಡಿಯಿಡಲು ಸಜ್ಜಾಗಿದೆ. ಒಂದೆಡೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಮತ್ತೊಂದೆಡೆ ಬಡತನ, ಅನಕ್ಷರತೆ, ಬದುಕಿನ ದುಸ್ಥಿತಿಯನ್ನೂ ತನ್ನೊಂದಿಗೆ ಕರೆದೊಯ್ಯುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಸೋಮವಾರಪೇಟೆ ಪಟ್ಟಣ ಸಮೀಪದ ವಳಗುಂದ ಗಿರಿಜನ ಹಾಡಿ.

ಈ ಹಾಡಿಯಲ್ಲಿ ಅನಕ್ಷರತೆ ಯಿಂದಾಗಿ ಇಂದಿಗೂ ಹಲವಷ್ಟು ಕುಟುಂಬಗಳು ಸರ್ಕಾರಗಳ ಸೌಲಭ್ಯ ಗಳಿಂದ ವಂಚಿತವಾಗಿವೆ. ಈ ನೆಲದ ಮೂಲ ನಿವಾಸಿಗಳೆಂದು ಹೇಳಿ ಕೊಳ್ಳುವ ಮಂದಿ, ವಳಗುಂದ ಹಾಡಿಯ ಮೂಲೆಯಲ್ಲಿ ಮುದುಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಹಾಡಿಯ ಬಹುತೇಕ ಮಂದಿಗೆ ಮತದಾನದ ಗುರುತಿನ ಚೀಟಿ ಇದೆ; ಆದರೆ ಈ ದೇಶದ ಪ್ರಜೆಯೆಂದು ಗುರುತಿಸುವ ಆಧಾರ್ ಕಾರ್ಡ್ ಇಲ್ಲ!

ಆಧಾರ್ ಕಾರ್ಡ್ ಇಲ್ಲದೇ ಇರುವುದರಿಂದ ರೇಷನ್ ಕಾರ್ಡ್ ಇಲ್ಲ ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಕುಟುಂಬ ಇದೆಯೆಂಬ ಅಸ್ತಿತ್ವದ ಪುರಾವೆಯಿಲ್ಲ. ಈ ಅಸ್ತಿತ್ವದ ಪುರಾವೆಯಿಲ್ಲದೇ ಇರುವುದರಿಂದ ಸರ್ಕಾರದಿಂದ ಮನೆಗಳೂ ಸಿಗುತ್ತಿಲ್ಲ ಅಷ್ಟೇ ಏಕೆ ? ಬ್ಯಾಂಕ್ ಖಾತೆಗಳೂ ಇಲ್ಲ-ಈ ಖಾತೆಗಳು ಇಲ್ಲದೇ ಇರುವುದರಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳು ಲಭಿಸುತ್ತಿಲ್ಲ. ಅಕ್ಕಿಯ ಹಣವೂ ಇಲ್ಲ, ಮನೆಯಲ್ಲಿ ‘ಗೃಹ ಲಕ್ಷಿö್ಮÃ’ ಇದ್ದರೂ ಸರ್ಕಾರದ ಗೃಹಲಕ್ಷಿö್ಮÃ ಯೋಜನೆಯಡಿ ತಿಂಗಳಿಗೆ ೨ ಸಾವಿರ ಬರುತ್ತಿಲ್ಲ!

ವಳಗುಂದ ಹಾಡಿ ಸ್ವಾತಂತ್ರö್ಯ ಬಂದ ನಂತರವೂ ಅಭಿವೃದ್ಧಿಯಿಂದ ಹಿಂದುಳಿದಿದೆ. ತಾತ ಮುತ್ತಾತಂದಿರ ಕಾಲದಿಂದಲೂ ಇಲ್ಲಿ ನೆಲೆಸಿದ್ದರೂ ಜಾಗಕ್ಕೆ ಸಂಬAಧಿಸಿದ ಹಕ್ಕುಪತ್ರಗಳು ಲಭ್ಯವಾಗಿಲ್ಲ. ಪರಿಣಾಮ ಸರ್ಕಾರದಿಂದ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಲು ಅನುದಾನ ಇದ್ದರೂ ಇವರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇಂದಿಗೂ ಪ್ಲಾಸ್ಟಿಕ್ ಹೊದಿಕೆ, ಮರದ ಕೊಂಬೆಗಳನ್ನು ಸುತ್ತಲೂ ನೆಟ್ಟು, ಅದಕ್ಕೆ ಕೆಸರು ಮೆತ್ತಿ ಗೋಡೆಗಳನ್ನಾಗಿ ನಿರ್ಮಿಸಿಕೊಂಡು ಕುಟುಂಬಗಳು ಜೀವನ ಸಾಗಿಸುತ್ತಿವೆ.

ವಳಗುಂದ ಹಾಡಿಯ ಕುಟುಂಬಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಇದರಲ್ಲಿ ಮನು-ಸೌಮ್ಯ ಹಾಗೂ ಗಂಗೆ ಅವರುಗಳು ಇಂದಿಗೂ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ದಿನದೂಡುತ್ತಿದ್ದಾರೆ.

ದಾಖಲೆ ಕೊಟ್ಟರೆ ಒಳ್ಳೇದು: ‘ಈ ಹಿಂದೆ ಇದ್ದ ಮುರುಕಲು ಮನೆ ಬಿದ್ದು ಹೋಗಿದೆ. ನಂತರ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಇಲ್ಲಿ ವಾಸವಿದ್ದೇವೆ. ೫ ವರ್ಷಗಳಿಂದ ಇದೇ ಗುಡಿಸಲಿನಲ್ಲಿ ಜೀವನ ನಡೆಯುತ್ತಿದೆ. ಆಧಾರ್ ಮತ್ತು ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಸರ್ಕಾರದವರೂ ಮನೆ ಕೊಟ್ಟಿಲ್ಲ, ಮಳೆಯಲ್ಲಂತೂ ಜೀವನ ಕಷ್ಟವಾಗುತ್ತಿದೆ. ದಾಖಲೆಗಳನ್ನು ಒದಗಿಸಿಕೊಟ್ಟರೆ ನಾವೂ ಎಲ್ಲರಂತೆ ಜೀವನ ನಡೆಸಬಹುದು, ನಮಗಂತೂ ವಿದ್ಯಾಭ್ಯಾಸವಿಲ್ಲ. ತಿಳಿದವರು ನಮಗೆ ದಾಖಲೆ ಒದಗಿಸಿದರೆ ಒಳ್ಳೇದು’ ಎಂದು ಹಾಡಿಯ ಗಂಗೆ ಹೇಳುತ್ತಾರೆ.

‘೫ ವರ್ಷದ ಮಗುವಿನೊಂದಿಗೆ ನಾವು ಈ ಗುಡಿಸಲಿನಲ್ಲಿ ವಾಸವಿದ್ದೇವೆ. ಈವರೆಗೆ ೩ ಚುನಾವಣೆಯಲ್ಲಿ ವೋಟ್ ಹಾಕಿದ್ದೇನೆ. ಆಧಾರ್ ಕಾರ್ಡ್ ಹಾಗೂ ವೋಟರ್ ಐ.ಡಿ. ಇದೆ. ಆದರೆ ರೇಷನ್ ಕಾರ್ಡ್ ಇಲ್ಲ, ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಯಾವುದೇ ಸೌಕರ್ಯ ಸಿಗುತ್ತಿಲ್ಲ’ ಎಂದು ಹಾಡಿಯ ನಿವಾಸಿ ಮನು ಅವರು ಅಳಲು ತೋಡಿಕೊಂಡಿದ್ದಾರೆ.

ವಿದ್ಯುತ್ ಇಲ್ಲ: ಇವರ ಮನೆಗೆ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ಆದರೆ ಈವರೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಮನೆಯ ಅನತಿ ದೂರದಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸಲಾಗಿದೆ. ತಂತಿ ಎಳೆಯಲಾಗಿಲ್ಲ, ನ್ಯಾಯಬೆಲೆ ಅಂಗಡಿಯಲ್ಲಿ ಸೀಮೆ ಎಣ್ಣೆಯೂ ಸಿಗುತ್ತಿಲ್ಲ. ಪರಿಣಾಮ ರಾತ್ರಿ ವೇಳೆ ಕತ್ತಲೆಯಲ್ಲಿಯೇ ಕಳೆಯಬೇಕಿದೆ.

ವಳಗುಂದ ಹಾಡಿಯಲ್ಲಿ ೫೦ಕ್ಕೂ ಅಧಿಕ ಪರಿಶಿಷ್ಟ ಪಂಗಡದ ಕುಟುಂಬಗಳಿವೆ. ಹೆಚ್ಚಿನವರು ಜೇನು ಕುರುಬರಾಗಿದ್ದಾರೆ. ಇವರ ಸುಪರ್ದಿಯಲ್ಲಿ ೫೦ ಎಕರೆಗೂ ಅಧಿಕ ಜಾಗವಿತ್ತು. ಇದೀಗ ಒತ್ತುವರಿಯಾಗಿ ೧೫ ಎಕರೆಯಷ್ಟು ಉಳಿದುಕೊಂಡಿದೆ. ೧೧ ಮಂದಿಯ ಹೆಸರಿನಲ್ಲಿ ಆರ್‌ಟಿಸಿ ಬರುತ್ತಿದೆ, ಇದರಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಅವರ ವಾರಿಸುದಾರರನ್ನು ಹುಡುಕುವುದೂ ಸಹ ಅಧಿಕಾರಿಗಳಿಗೆ ಕಷ್ಟವಾಗಿದೆ.

ಮದ್ಯ-ಇಸ್ಪೀಟ್ ಅಡ್ಡೆ: ‘ವಳಗುಂದ ಹಾಡಿ ಮದ್ಯ ಮಾರಾಟ-ಇಸ್ಪೀಟ್ ಅಡ್ಡೆಯಾಗಿದೆ. ರಸ್ತೆಯಲ್ಲಿಯೇ ಕುಡಿಯುವುದು, ಇಸ್ಪೀಟ್ ಆಡುವುದು ಮಾಡುತ್ತಾರೆ. ಹೊರಗಡೆಯಿಂದಲೂ ಹಾಡಿಗೆ ಬಂದು ಇಸ್ಪೀಟ್ ಆಡುತ್ತಾರೆ. ಕೇಳಲು ಹೋದರೆ ನಮಗೆ ಹೊಡೆಯುತ್ತಾರೆ. ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಓಡಾಡುವ ಹಾಗೆಯೇ ಇಲ್ಲ. ಪೊಲೀಸರಂತೂ ಇತ್ತ ಬರುವುದೇ ಇಲ್ಲ’ ಎಂದು ಹಾಡಿಯ ಮಹಿಳೆಯರು ವಾಸ್ತವಾಂಶ ಬಿಚ್ಚಿಟ್ಟಿದ್ದಾರೆ.

ಅನಕ್ಷರತೆಯೇ ಶಾಪ: ಹಾಡಿಯ ಹಲವಷ್ಟು ಮಂದಿ ಅನಕ್ಷರಸ್ಥರಾಗಿದ್ದಾರೆ. ಮಕ್ಕಳು, ಯುವಕರು ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಅಂಗನವಾಡಿ, ಶಾಲಾ ಶಿಕ್ಷಕರು ಬಂದರೆ ಶಾಲೆಗಳಿಗೆ ತೆರಳುವ ಬದಲು ಬೇರೊಂದು ಹಾಡಿಗೆ ತೆರಳುತ್ತಾರೆ. ಅಲ್ಲಿ ಕೆಲ ಕಾಲ ಇದ್ದು ನಂತರ ವಾಪಸ್ ಬರುತ್ತಾರೆ. ಕಾನೂನು ಜ್ಞಾನದ ಕೊರತೆಯೂ ಇಲ್ಲಿ ಬಹುವಾಗಿ ಕಾಡುತ್ತಿದೆ. ಕಾನೂನಿನ ಜ್ಞಾನ ಕೊರತೆಯಿಂದ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ಜೈಲು ಸೇರಿದವರೂ ಇದ್ದಾರೆ. ಈ ಹಾಡಿಯ ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತವಾಗದAತೆ ಈಗಿನಿಂದಲೇ ಗಮನ ಹರಿಸಬೇಕಿದೆ.

‘ಹಾಡಿಗಳಲ್ಲಿರುವ ಕೆಲ ನಿವಾಸಿಗಳಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಆಧಾರ್ ಕಾರ್ಡ್ ಒದಗಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಇದ್ದ ಕಾರ್ಡ್ಗಳನ್ನು ಕೆಲವರು ಕಳೆದುಕೊಂಡಿದ್ದಾರೆ. ಅದಕ್ಕೆ ನೀಡಿದ್ದ ಮೊಬೈಲ್ ಸಂಖ್ಯೆಯೂ ಇಲ್ಲವಾಗಿದೆ. ಹೀಗಾಗಿ ಹೊಸ ಕಾರ್ಡ್ ಮಾಡಿಸಲು ಸಮಸ್ಯೆಯಾಗುತ್ತಿದೆ. ಮೈಸೂರಿನಲ್ಲಿರುವ ಕಚೇರಿಯನ್ನು ಸಂಪರ್ಕಿಸಲಾಗಿದ್ದು, ಶೀಘ್ರದಲ್ಲಿಯೇ ಆಧಾರ್ ಒದಗಿಸಲಾಗುವುದು’ ಎಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ವಳಗುಂದ ಹಾಡಿ ಮೇಲ್ನೋಟಕ್ಕೆ ಆಧುನಿಕ ಪ್ರಪಂಚದಿAದ ದೂರ ಇರುವಂತೆ ಭಾಸವಾಗುತ್ತಿದೆ. ಚುನಾವಣೆ ಸಂದರ್ಭಗಳಲ್ಲಿ ಗುಡಿಸಲುಗಳಿಗೆ ಎಡತಾಕಿ ಮತ ಭಿಕ್ಷೆ ಬೇಡುವ ಮಂದಿ, ನಂತರದ ದಿನಗಳಲ್ಲೂ ಇತ್ತ ತಲೆ ಹಾಕಿ ಸಮಸ್ಯೆ ಆಲಿಸಿದರೆ ಎಲ್ಲಾ ಸಮಸ್ಯೆಗಳೂ ಬಗೆಹರಿಯಲಿವೆ. ಇನ್ನಾದರೂ ಆ ಪ್ರಯತ್ನ ಆಗುತ್ತದೆಯೋ.., ಕಾದು ನೋಡಬೇಕಿದೆ.

- ವಿಜಯ್ ಹಾನಗಲ್

ಸೋಮವಾರಪೇಟೆ.