ಕುಶಾಲನಗರ, ಜು. ೯: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳಿಗೆ ತಾ.೨೧ ರಂದು ಚುನಾವಣೆ ದಿನಾಂಕ ನಿಗದಿಪಡಿಸಲಾಗಿತ್ತು. ಚುನಾವಣಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಘಟಕಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಜುಲೈ ೮ ಅಂತಿಮ ದಿನವಾಗಿತ್ತು. ಆದರೆ ಯಾವುದೇ ಪೈಪೋಟಿ ಇಲ್ಲದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸೇರಿದಂತೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕು ಘಟಕಗಳ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅವರ ಸಮ್ಮುಖದಲ್ಲಿ ಕುಶಾಲನಗರದ ವಾಸವಿ ಮಹಲ್ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಸದಾಶಿವ ಸ್ವಾಮೀಜಿ, ೨೦೨೪-೨೯ ನೇ ಅವಧಿಗೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹೆಚ್.ವಿ.ಶಿವಪ್ಪ, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಆದರ್ಶ ಕೂಗೇಕೋಡಿ ಮತ್ತು ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ರಾಜೇಶ್ ನಾಲ್ಕೇರಿ, ಕುಶಾಲನಗರ ತಾಲೂಕು ಅಡಹಾಕ್ ಸಮಿತಿ ಅಧ್ಯಕ್ಷರಾಗಿ ಹೆಚ್.ಎಂ.ಮಧುಸೂದನ್ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪ್ರಮಾಣಪತ್ರ ವಿತರಿಸಿ ಮಾತನಾಡಿದ ಸದಾಶಿವ ಸ್ವಾಮೀಜಿ, ಚುನಾವಣೆಯಲ್ಲಿ ಮನಸ್ತಾಪಕ್ಕೆ ಎಡೆಮಾಡಿಕೊಡಬಾರದು ಎಂಬ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದ ಪರಿಣಾಮ ನೂತನ ಘಟಕಗಳು ಅವಿರೋಧವಾಗಿ ಅಯ್ಕೆಯಾಗಿರುವುದು ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ಆಡಳಿತ ಮಂಡಳಿಗಳ ರಚನೆ ಕಾರ್ಯ ನಡೆಯಲಿದೆ. ನೂತನ ಪದಾಧಿಕಾರಿಗಳು ಸಮಾಜವನ್ನು ಒಗ್ಗೂಡಿಸಿ ಕಟ್ಟಿ ಬೆಳೆಸುವಲ್ಲಿ ಮುಂದಾಗಬೇಕಿದೆ ಎಂದರು.
ನೂತನ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ರಾಜ್ಯಮಟ್ಟದ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ಒದಗಿಸಿದರು.
ಕೊಡಗು ಜಿಲ್ಲಾ ಘಟಕದ ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿತೇಂದ್ರ, ಸೋಮವಾರಪೇಟೆ ತಾಲೂಕು ಘಟಕದ ಉಪ ಚುನಾವಣಾಧಿಕಾರಿ ವಿರೂಪಾಕ್ಷ ಆಡಿನಾಡೂರು, ವೀರಾಜಪೇಟೆ ತಾಲೂಕು ಘಟಕದ ಉಪ ಚುನಾವಣಾಧಿಕಾರಿ ಎಸ್.ಎಸ್. ಸುರೇಶ್ ಸಭೆಯಲ್ಲಿ ಇದ್ದರು. ಸಮಾಜದ ಪ್ರಮುಖರಾದ ಶಾಂಭ ಶಿವಮೂರ್ತಿ, ಉದಯಕುಮಾರ್, ಮಹಾದೇವಪ್ಪ, ಪ್ರವೀಣ್ ಕುಮಾರ್, ಯತೀಶ್, ಚಂದ್ರಶೇಖರ್, ಎಚ್.ಬಿ. ಚಂದ್ರಪ್ಪ ಹಾಗೂ ಎ.ಆರ್ ಮಮತಾ ಮತ್ತಿತರರು ಇದ್ದರು.