ಮಡಿಕೇರಿ, ಜು. ೧೦: ಮನೆಯೊಂದರಲ್ಲಿ ಕಳ್ಳತನ ನಡೆಸಿದ್ದ ಆರೋಪಿಯೋರ್ವನನ್ನು ಜಿಲ್ಲಾ ಶ್ವಾನದಳದ ‘ಬ್ರೂನೋ’ ಪತ್ತೆ ಮಾಡಿ ಪೊಲೀಸರಿಗೆ ನೆರವಾಗಿರುವ ಪ್ರಕರಣ ನಡೆದಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಾರ್ಮುಡಿ ಗ್ರಾಮದಲ್ಲಿ ತಾ.೭ರಂದು ರಾತ್ರಿ ಅಲ್ಲಿನ ಪಿ.ಎಂ. ಮೋಹನ್ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ನಗದು ಅಪಹರಿಸಿದ್ದ ಕುರಿತು ದೂರು ದಾಖಲಾಗಿತ್ತು. ಇದರಂತೆ ಶ್ವಾನದಳದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಬ್ರೂನೋ ಇವರ ಮನೆಯ ಸನಿಹದಲ್ಲಿ ಬರುವ ಲೈನ್‌ಮನೆ ಯೊಂದರಲ್ಲಿದ್ದ ವ್ಯಕ್ತಿಯೋರ್ವನನ್ನು ಗುರುತಿಸಿದೆ. ಈ ಶಂಕಿತ ವ್ಯಕ್ತಿಯ ವಿಚಾರಣೆ ನಡೆಸಿದಾಗ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಂಜು ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತನಿAದ ಕಳವು ಮಾಡಲಾಗಿದ್ದ ೫ ಗ್ರಾಂ ಚಿನ್ನ ಹಾಗೂ ರೂ.೨ ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲಾಖೆಯ ಈ ಹೆಮ್ಮೆಯ ಶ್ವಾನ ಎ.ಆರ್.ಎಸ್.ಐ. ಜಿತೇಂದ್ರ ರೈ, ಮನಮೋಹನ್, ಸಿದ್ಧನಗೌಡ ಪಾಟೀಲ್ ಅವರ ಗರಡಿಯಲ್ಲಿ ಪಳಗಿದೆ. ಈ ಬಗ್ಗೆ ಎಸ್.ಪಿ. ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.