ಸಿದ್ದಾಪುರ, ಜು. ೧೦: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾರು ಜಖಂಗೊAಡಿರುವ ಘಟನೆ ಇಂಜಿಲಗೆರೆಯ ಪುಲೀಯೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಇಂಜಿಲಗೆರೆ ಗ್ರಾಮದ ಸರಸ್ವತಿ ಅಯ್ಯಪ್ಪ ಎಂಬವರಿಗೆ ಸೇರಿದ ಸ್ಕೂಲ್ ಎಸ್ಟೇಟ್‌ನಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೆಲಮಕ್ಕಡ ಪ್ರಕಾಶ್ ಕುಶಾಲಪ್ಪ ಎಂಬವರು ತಮ್ಮ ವಸತಿಗೃಹದ ಸಮೀಪ ಕಾಫಿ ಕಣದಲ್ಲಿ ರಾತ್ರಿ ತಮ್ಮ ಆಲ್ಟೋ ಕಾರನ್ನು ನಿಲ್ಲಿಸಿದ್ದರು. ರಾತ್ರಿ ಸಮಯದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ ಕೆಲವು ಕಾಡಾನೆಗಳು ಕಾರಿನ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದ್ದಾರೆ. ಕಾಡಾನೆಗಳ ದಾಳಿಗೆ ಸಿಲುಕಿ ಕಾರು ಸಂಪೂರ್ಣವಾಗಿ ಜಖಂಗೊAಡಿದ್ದು, ಅಂದಾಜು ೮೦ ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಪ್ರಕಾಶ್ ಕುಶಾಲಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಕಾಡಾನೆ ದಾಳಿಗೆ ಸಿಲುಕಿದ ಕಾರಿನ ಮಾಲೀಕರಿಗೆ ಪರಿಹಾರವನ್ನು ಅರಣ್ಯ ಇಲಾಖೆ ವತಿಯಿಂದ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿಕರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

-ವಾಸು