೨.೫ ಕೋಟಿ ಸಾಕು ಎಂದ ದ್ರಾವಿಡ್

ನವದೆಹಲಿ, ಜು. ೧೦: ನನಗೆ ಐದು ಕೋಟಿ ಹಣ ಬೇಡ. ೨.೫ ಕೋಟಿ ರೂಪಾಯಿ ಬಹುಮಾನ ಮಾತ್ರ ಸಾಕು ಎಂದು ದ್ರಾವಿಡ್ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ. ಹೃದಯವಂತ, ಕನ್ನಡಿಗ ರಾಹುಲ್ ದ್ರಾವಿಡ್ ಮತ್ತೊಮ್ಮೆ ತಮ್ಮ ನಡೆ ಮೂಲಕ ಕೋಟ್ಯಾಂತರ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ವಿಷಯ ಏನೆಂದರೆ ವಿಶ್ವಕಪ್ ಗೆದ್ದ ಬೆನ್ನಲ್ಲೇ, ಬಿಸಿಸಿಐ ಟೀಂ ಇಂಡಿಯಾಗಿ ಬಹುಮಾನವಾಗಿ ಬರೋಬ್ಬರಿ ೧೨೫ ಕೋಟಿ ರೂಪಾಯಿ ಘೋಷಣೆ ಮಾಡಿತ್ತು. ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಜೊತೆ ಅಮೆರಿಕ ಮತ್ತು ವೆಸ್ಟ್ ವಿಂಡೀಸ್‌ಗೆ ಪ್ರಯಾಣ ಬೆಳೆಸಿದ್ದ ೪೨ ಮಂದಿಗೆ ಈ ಹಣವನ್ನು ಹಂಚಿಕೆ ಮಾಡಲಾಗುವುದು ಎಂದು ಬಿಸಿಸಿಐ ಹೇಳಿತ್ತು. ಅದರಂತೆ ಬಿಸಿಸಿಐ ಎಲ್ಲರಿಗೂ ಹಣವನ್ನು ನೀಡುತ್ತಿದೆ. ಬಿಸಿಸಿಐ ನಿರ್ಧಾರದಂತೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಐದು ಕೋಟಿ ನೀಡೋದಾಗಿ ಹೇಳಿತ್ತು. ದ್ರಾವಿಡ್ ಮನವಿಯನ್ನು ಪುರಸ್ಕರಿಸಿದ ಬಿಸಿಸಿಐ, ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿದೆ.

ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ : ೫ ಸಾವಿರ ಎಕರೆ ಭೂಮಿ ಅಗತ್ಯ

ಬೆಂಗಳೂರು, ಜು. ೧೦: ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವಾರ್ಷಿಕವಾಗಿ ೧೦೦ ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ೪,೫೦೦-೫,೦೦೦ ಎಕರೆ ಭೂಮಿ ಬೇಕಾಗಲಿದ್ದು, ಹಲವು ಅಂಶಗಳನ್ನು ಪರಿಗಣಿಸಿ ಇದನ್ನು ಉನ್ನತ ಮಟ್ಟದ ಸಮಿತಿಯು ಅಂತಿಮಗೊಳಿಸಲಿದೆ ಎಂದು ತಿಳಿಸಿದರು. ಬೆಂಗಳೂರು ದೇಶದ ತಂತ್ರಜ್ಞಾನ ಮತ್ತು ನವೋದ್ಯಮಗಳ ರಾಜಧಾನಿಯೂ ಆಗಿದ್ದು, ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರ ಅತಿದಟ್ಟಣೆಯಿಂದ ಕೂಡಿರುವ ಮೂರನೇ ಏರ್-ಪೋರ್ಟ್ ಆಗಿದೆ. ಸದ್ಯಕ್ಕೆ ಇಲ್ಲಿ ವರ್ಷಕ್ಕೆ ೫೨ ಮಿಲಿಯನ್ ಪ್ರಯಾಣಿಕರ ಮತ್ತು ೦.೭೧ ಮಿಲಿಯನ್ ಟನ್ ಸರಕು ಸಾಗಣೆ ನಿರ್ವಹಣೆ ಆಗುತ್ತಿದೆ. ಇವುಗಳನ್ನು ಕ್ರಮವಾಗಿ ೧೧೦ ಮಿಲಿಯನ್ ಮತ್ತು ೧.೧೦ ಮಿಲಿಯನ್ ಟನ್ ತನಕ ವಿಸ್ತರಿಸಬಹುದಾಗಿದ್ದು, ೨೦೩೫ರ ವೇಳೆಗೆ ಇದು ಗರಿಷ್ಠ ಮಟ್ಟ ತಲುಪಲಿದೆ. ಆದರೆ ಈಗ ಎರಡು ರನ್-ವೇ ಇದ್ದು, ಇದರಲ್ಲಿ ವಿಸ್ತರಣೆ ಸಾಧ್ಯವಿಲ್ಲದಂತಾಗಿದೆ ಎಂದು ಅವರು ವಿವರಿಸಿದರು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಉದ್ಯೋಗ

ಚಾಮರಾಜನಗರ, ಜು. ೧೦: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಉದ್ಯೋಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ. ಇಂದು ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ತಂದುಕೊಟ್ಟ ಚಾಮರಾಜನಗರ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿಆಕ್ಸಿಜನ್ ಲಭ್ಯವಾಗದೆ ಮೃತಪಟ್ಟವರ ಕುಟುಂಬಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಯಾರೂ ದಯಾಮರಣ ಕೇಳಬಾರದು. ಆಕ್ಸಿಜನ್ ದುರಂತದ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವAತೆ ಮತ್ತು ಉದ್ಯೋಗ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದು ಯುದ್ಧ ಮಾಡುವ ಸಮಯವಲ್ಲ; ಪ್ರಧಾನಿ ಮೋದಿ

ವಿಯೆನ್ನಾ, ಜು. ೧೦: ಆಷ್ಟಿçಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಉಕ್ರೇನ್ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಸೇರಿದಂತೆ ಜಗತ್ತಿನ ಇತರ ಸಂಘರ್ಷಗಳ ಕುರಿತು ವಿವರವಾದ ಫಲಪ್ರದ ಚರ್ಚೆ ನಡೆಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. ಎರಡು ದಿನಗಳ ಭೇಟಿಗಾಗಿ ಮಂಗಳವಾರ ರಾತ್ರಿ ರಷ್ಯಾ ಆಗಮಿಸಿರುವ ಪ್ರಧಾನಿ ಮೋದಿ, ಭಾರತ ಮತ್ತು ಆಸ್ಟಿçಯಾ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಹೊಸ ಸಾಧ್ಯತೆಗಳನ್ನು ಗುರುತಿಸಿವೆ ಮತ್ತು ಮುಂಬರುವ ದಶಕದ ಸಹಕಾರಕ್ಕಾಗಿ ಒಂದು ನೀಲನಕ್ಷೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಇಂದು, ಚಾನ್ಸೆಲರ್ ನೆಹಮ್ಮರ್ ಮತ್ತು ನಾನು ಫಲಪ್ರದವಾದ ಚರ್ಚೆ ನಡೆಸಿದ್ದೇವೆ. ನಮ್ಮ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಹೊಸ ಸಾಧ್ಯತೆಗಳನ್ನು ಗುರುತಿಸಿದ್ದೇವೆ. ನಮ್ಮ ಸಂಬAಧಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ನೀಡಲು ನಾವು ನಿರ್ಧರಿಸಿದ್ದೇವೆ. ಮುಂಬರುವ ದಶಕದ ಸಹಕಾರಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ" ಎಂದು ಪ್ರಧಾನಿ ಮೋದಿ ಅವರು ಚಾನ್ಸೆಲರ್ ನೆಹಮ್ಮರ್ ಅವರ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಆ ದಾಳಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬAಧಿಸಿದAತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ದದ್ದಲ್ ಮನೆಯ ಮೇಲೆ ಮತ್ತು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿರುವ ಬಿ.ನಾಗೇಂದ್ರ ನಿವಾಸದ ಮೇಲೂ ಮೂರ್ನಾಲ್ಕು ಅಧಿಕಾರಿಗಳಿದ್ದ ತಂಡ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್, ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮೂಡಾ ಹಗರಣ: ಸಿದ್ದರಾಮಯ್ಯ ಪತ್ನಿ ವಿರುದ್ಧ ಪ್ರಕರಣ!

ಮೈಸೂರು, ಜು. ೧೦: ಮೂಡಾ ಹಗರಣಕ್ಕೆ ಸಂಬAಧಿಸಿದAತೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ಒಟ್ಟು ೧೦ ಮಂದಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ದಾಖಲೆ ಸಲ್ಲಿಸಿ ಸೈಟ್ ಪಡೆದ ಆರೋಪದ ಮೇರೆಗೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ದೇವರಾಜು ಹಾಗೂ ಕುಟುಂಬದವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬವರು ದೂರು ದಾಖಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪ ನೋಂದಣಾಧಿಕಾರಿ ಹಾಗೂ ಮೂಡಾ ಅಧಿಕಾರಿಗಳ ಶಾಮೀಲು ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರ ಜೊತೆಗೆ ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಅವರು ಪತ್ರ ಬರೆದಿದ್ದಾರೆ. ಈ ಮಧ್ಯೆ ಮೂಡಾ ಹಗರಣ ಕುರಿತು ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿ ಜುಲೈ ೧೨ ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.