ಸೋಮವಾರಪೇಟೆ, ಜು. ೧೦: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಿದ್ದು, ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊAಡಿವೆ. ಸಮೀಪದ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿಯೂ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊAಡಿದ್ದು, ಇದೀಗ ವಿದ್ಯಾರ್ಥಿಗಳನ್ನು ಕರೆತರಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ನೇರುಗಳಲೆ ಪೂರ್ವ ಪ್ರಾಥಮಿಕ ಶಾಲಾ ಸಮಿತಿಯ ಪದಾಧಿಕಾರಿಗಳ ಪರಿಶ್ರಮದಿಂದಾಗಿ ಈ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಗೆ ೧೮ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ದಾನಿಗಳ ನೆರವಿನೊಂದಿಗೆ ಈಗಾಗಲೇ ೧೨ ಲಕ್ಷ ವೆಚ್ಚ ಮಾಡಿ ಕೊಠಡಿಗಳನ್ನು ನವೀಕರಣ ಮಾಡಲಾಗಿದ್ದು, ಇದೀಗ ನೂತನವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಈ ಶಾಲೆಗೆ ವ್ಯವಸ್ಥೆಗಳನ್ನು ಒದಗಿಸ ಲಾಗುತ್ತಿದೆ.

ಈಗಾಗಲೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಒಟ್ಟು ೧೨೦ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ೧೮ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೫೬ ಮಕ್ಕಳಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಭಾಗದಲ್ಲಿ ಬಸ್ ಸಂಚಾರ ಇಲ್ಲದೇ ಇರುವುದರಿಂದ ಹಲವಷ್ಟು ಮಕ್ಕಳು ವಿದ್ಯಾಭ್ಯಾಸಕ್ಕೆ ಕಷ್ಟಪಡು ವಂತಾಗಿತ್ತು. ಆನೆ ಹಾವಳಿಯ ನಡುವೆಯೂ ಮಕ್ಕಳು ಶಾಲೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದು, ಬೆಳಿಗ್ಗೆ ಬೇಗನೆ ಮನೆ ಬಿಟ್ಟು ಸಂಜೆ ತಡವಾಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪೂರ್ವ ಪ್ರಾಥಮಿಕ ಶಾಲಾ ಸಮಿತಿಯ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಿರುವುದು, ಈ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ನೇರುಗಳಲೆ ಶಾಲೆಗೆ ದೂರದ ಕಾಟಿಕೊಪ್ಪಲು, ಆಡಿನಾಡೂರು, ಹೊಸಳ್ಳಿ, ತಣ್ಣೀರುಹಳ್ಳ, ವಳಗುಂದ, ದೊಡ್ಡಬ್ಬೂರು, ಭಕ್ತರಳ್ಳಿ, ಅರೆಯೂರು, ಅಬ್ಬೂರುಕಟ್ಟೆ, ಯಲಕನೂರು ಭಾಗದಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹಲವಷ್ಟು ವಿದ್ಯಾರ್ಥಿಗಳು ಬಸ್ ಸೇರಿದಂತೆ ಇನ್ನಿತರ ವಾಹನ ಸೌಕರ್ಯವಿಲ್ಲದೇ ಕಾಲ್ನಡಿಗೆಯಲ್ಲಿಯೇ ಶಾಲೆಗೆ ಆಗಮಿಸಬೇಕಿತ್ತು. ಇದೀಗ ಈ ಗ್ರಾಮಗಳಲ್ಲಿ ಶಾಲಾ ಬಸ್ ಸಂಚಾರ ಆರಂಭಿಸಿದ್ದು, ಮಕ್ಕಳಿಗೆ ಅನುಕೂಲ ಕಲ್ಪಿಸಿದಂತಾಗಿದೆ.

ಬಸ್ ವ್ಯವಸ್ಥೆ ಒದಗಿಸುವ ಸಂದರ್ಭ ಸಮಿತಿ ಅಧ್ಯಕ್ಷ ಬೋಜೇಗೌಡ, ಗೌರವ ಸಲಹೆಗಾರ ಎಸ್.ಎಂ. ಡಿಸಿಲ್ವಾ, ವಿ.ಎಂ. ವಿಜಯ, ವಿ.ಎಂ. ಶಿವದಾಸ್, ವಿನೋದ್‌ಕುಮಾರ್, ನಿರ್ದೇಶಕರು ಗಳಾದ ಗಿರೀಶ್ ಮಲ್ಲಪ್ಪ, ಕೆ.ಆರ್. ಕಿರಣ್, ಎ.ಜಿ. ಅಜಿತ್, ಕಾರ್ಯದರ್ಶಿ ಸಂಭ್ರಮ್, ಖಜಾಂಚಿ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷರುಗಳು ಪುಷ್ಪಾವತಿ, ಶೈಲಾ, ಪಿಡಿಓ ಗಣೇಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.