ಮಡಿಕೇರಿ, ಜು. ೧೦: ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಭಾರೀ ವಾಹನಗಳಲ್ಲಿ ಮರ ಮತ್ತಿತರ ವಸ್ತುಗಳ ಸಾಗಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಇದರ ಉಲ್ಲಂಘನೆಯಾಗುತ್ತಿದೆ ಎಂದು ಬಿಳಿಗೇರಿಯ ಬೆಳೆಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಞÂÃರ ಉಮೇಶ್ ಅಪ್ಪಣ್ಣ, ಬಿಳಿಗೇರಿ ಸಮೀಪ ಕುಂಬಳದಾಳು ಗ್ರಾಮದಲ್ಲಿ ರೆಸಾರ್ಟ್ವೊಂದು ನಿರ್ಮಾಣವಾಗುತ್ತಿದ್ದು, ಇದರ ಕಾಮಗಾರಿಗಾಗಿ ಹತ್ತು ಚಕ್ರದ ವಾಹನದಲ್ಲಿ ಕಲ್ಲು, ಮರಳು, ಜಲ್ಲಿಗಳನ್ನು ಸಾಗಿಸಲಾಗುತ್ತಿದೆ. ರೆಸಾರ್ಟ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಮಳೆಗಾಲದಲ್ಲಿ ಭಾರೀ ವಾಹನಗಳ ಓಡಾಟದಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೆ ಬಿಳಿಗೇರಿ ವ್ಯಾಪ್ತಿಯಲ್ಲಿ ಮಳೆಗಾಲದ ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಸಿಲ್ವರ್ ಮರಗಳನ್ನು ಕಡಿದು ಭಾರಿ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಇದು ಕೂಡ ಇಲ್ಲಿನ ರಸ್ತೆಗಳ ಅವನತಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಶಾಸಕರು ಮಳೆಗಾಲ ಮುಗಿಯುವವರೆಗೂ ಭಾರಿ ವಾಹನಗಳಲ್ಲಿ ಸರಕು ಸಾಗಾಟಕ್ಕೆ ಕಟ್ಟು ನಿಟ್ಟಾಗಿ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಜೆಸಿಬಿ ಯಂತ್ರವನ್ನು ತುರ್ತು ಸಂದರ್ಭದ ಕೆಲಸಗಳಿಗೆ ಹೊರತುಪಡಿಸಿ ದೊಡ್ಡ ದೊಡ್ಡ ಕಾಮಾಗಾರಿಗಳಿಗೆ ಮಳೆಗಾಲದಲ್ಲಿ ಬಳಸುವುದನ್ನು ನಿಷೇಧಿಸಿ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವಂತೆಯೂ ಅವರು ಆಗ್ರಹಿಸಿದರು. ಸಾಮಾನ್ಯ ರೈತನೊಬ್ಬ ಸ್ವಂತ ಉಪಯೋಗಕ್ಕೆ ಒಂದು ಮರ ಕಡಿಯಲು ಮುಂದಾದರೆ ಹತ್ತು ಗಿಡಗಳನ್ನು ನೆಡುವಂತೆ ಮುಚ್ಚಳಿಕೆ ಬರೆಸಿಕೊಳ್ಳುವ ಇಲಾಖೆ ಸಾವಿರಾರು ಮರಗಳನ್ನು ಕಡಿಯುವ ಮಾಫಿಯಾಗಳಿಂದ ಎಷ್ಟು ಮರಗಳನ್ನು ನೆÀಡಿಸಿಕೊಂಡಿದೆ ಎಂದು ಅವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಮಳೆಗಾಲದ ಆರಂಭದಲ್ಲಿ ರಸ್ತೆ ಬದಿಯ ಚರಂಡಿಗಳನ್ನು ಸರಿಪಡಿಸಿ ಕಾಡುಗಳನ್ನು ಕಡಿಯುವ ಕೆಲಸ ಆಗದೆ ಇರುವುದರಿಂದ ರಸ್ತೆಗಳ ಮೇಲೆ ನೀರು ಹರಿದು ರಸ್ತೆಗಳು ಶಿಥಿಲಗೊಳ್ಳುತ್ತಿವೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಬೆಳೆಗಾರರಾದ ಕೋಟೇರ ಶರಿ ಮುದ್ದಪ್ಪ, ಪರ್ಲಕೋಟಿ ಮಾಚಯ್ಯ, ತುಂತಜೆ ತಿಮ್ಮಯ್ಯ ಉಪಸ್ಥಿತರಿದ್ದರು.