ಮಡಿಕೇರಿ, ಜು. ೧೦: ಬಿಜೆಪಿ ನಾಯಕರ, ಕಾರ್ಯಕರ್ತರ ಅವಹೇಳನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಟ್ಟ ಆರೋಪದಡಿ ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಜೂನ್ ೨೦ ರಂದು ವೀರಾಜಪೇಟೆಯಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಪೊನ್ನಣ್ಣ ಅವರ ಅಣಕು ಶವಯಾತ್ರೆ, ಪ್ರತಿಕೃತಿ ದಹನವನ್ನು ಖಂಡಿಸಿ ಮೈನಾ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ವಿರುದ್ಧ ಅವಮಾನಕಾರಿ ಬರಹ ಬರೆದು ಹಂಚಿಕೊAಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರನ್ವಯ ಕೋರ್ಟ್ ಅನುಮತಿ ಪಡೆದು ವಿವಿಧ ಸೆಕ್ಷನ್ಗಳಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಫ್ಐಆರ್ ದುರುದ್ದೇಶ ಮತ್ತು ರಾಜಕೀಯ ವೈಷಮ್ಯದಿಂದ ಕೂಡಿದ್ದು, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದಲ್ಲಿ ಮೈನಾ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ನಾಗಪ್ರಸನ್ನ ಅವರ ಪೀಠ ವಾದ ಆಲಿಸಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಮೈನಾ ಪರ ವಕೀಲೆ ಲೀಲಾ ದೇವಾಡಿಗ ವಾದ ಮಂಡಿಸಿದರು.