ಐಗೂರು, ಜು. ೧೧: ಐಗೂರಿನಿಂದ ಡಿ.ಬಿ.ಡಿ, ಕಿರುಗಂದೂರು, ಬಾಗಲಖಂಡಿ ಮೂಲಕ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸಲು ಇದ್ದ ಹಳೆಯ ಕಿರು ಸೇತುವೆಯು ಈ ಹಿಂದೆ ಸಾರಿಗೆ ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಇತ್ತೀಚೆಗೆ ಸ್ಥಳದಲ್ಲಿದ್ದ ಹಳೆಯ ಕಿರು ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆಯನ್ನು ನಿರ್ಮಿಸಲಾಯಿತು. ಇನ್ನೂ ಉದ್ಘಾಟನೆಗಾಗಿ ಕಾಯುತ್ತಿರುವ, ಈ ನೂತನ ಸೇತುವೆ ನಿರ್ಮಾಣವಾಗಿ ಆರು ಏಳು ತಿಂಗಳುಗಳು ಕಳೆದಿದ್ದು ಗುತ್ತಿಗೆದಾರರು ಸೇತುವೆಯ ರಸ್ತೆಯ ಮೇಲೆ ಹಾಕಿದ್ದ ಮಣ್ಣು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಂಪೂರ್ಣ ರಸ್ತೆಗೆ ಬಂದು ಕೆಸರುಮಾಯವಾಗಿದೆ. ಈ ಭಾಗದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡಿಕೊಂಡೆ ವಾಹನ ಚಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಲಾಖಾ ಅಭಿಯಂತರರು ಗುತ್ತಿಗೆದಾರರಿಗೆ ಸೂಚಿಸಿ, ಗುತ್ತಿಗೆದಾರರು ಕೆಸರುಮಯವಾದ ಮಣ್ಣನ್ನು ಬದಿಗೆ ಸರಿಸಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡಬೇಕೆಂದು ಈ ಭಾಗದ ನಿವಾಸಿಗಳಾದ ಸುಬ್ರಮಣಿ, ಪಾಪಣ್ಣ, ಎನ್. ಗಣೇಶ್, ಮುರುಗ ಮತ್ತು ದಿನೇಶ್ ಶೆಟ್ಟಿ ಆಗ್ರಹಿಸಿದ್ದಾರೆ. -ಸುಕುಮಾರ.