ಮಡಿಕೇರಿ, ಜು. ೧೧: ೨೦೨೩-೨೪ನೇ ಸಾಲಿನಲ್ಲಿ ಕಡಗದಾಳು ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ. ೧೦೦ ರಷ್ಟು ಫಲಿತಾಂಶ ಬರಲು ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಸಮಾಜ ಸೇವಕರು ಹಾಗೂ ದಾನಿಗಳಾದ ಟಿ.ಆರ್. ವಾಸುದೇವ್, ಪ್ರಸ್ತುತ ದಿನಗಳಲ್ಲಿ ಶಿಕ್ಷಕರಲ್ಲಿ ದೇವರನ್ನು ಕಾಣುತ್ತಿದ್ದೇವೆ. ಶಿಕ್ಷಕರನ್ನು ಗೌರವಿಸಿದರೆ ಎಲ್ಲ ಕೆಲಸ ಕಾರ್ಯಗಳು ನೆರವೇರುತ್ತದೆ ಎಂದರು.

ಸAಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಪ್ರಾಸ್ತಾವಿಕ ಮಾತನಾಡಿ, ಕೊಡಗಿನ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬರಬೇಕು ಎಂಬ ಕಾರಣಕ್ಕಾಗಿ ಸಂಘಟನೆಯ ವತಿಯಿಂದ ಸುಮಾರು ೧೦ ವರ್ಷಗಳಿಂದ ಉತ್ತಮ ಫಲಿತಾಂಶ ಬಂದ ಸರಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದರು.

ಸಮಾಜ ಸೇವಕ ಉಣ್ಣಿಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಸಂಘಟನೆಗಳು ಸ್ಪಂದಿಸುವAತಾಗಬೇಕು ಎಂದರು. ರಾಜರಾಜೇಶ್ವರಿ ಶೋ ರೂಂನ ಮಾಲೀಕ ಕಿರಣ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಹಲವು ಸಮಸ್ಯೆಗಳ ನಡುವೆಯೂ ಉತ್ತಮ ಅಂಕ ಪಡೆಯುವುದು ಶ್ಲಾಘನೀಯ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಭವತಿ ಮಾತನಾಡಿದರು. ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಸಿರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಡಗದಾಳು ಗ್ರಾ. ಪಂ. ಅಧ್ಯಕ್ಷ ಭರತ್, ಅಭಿವೃದ್ಧಿ ಅಧಿಕಾರಿ ಅನಿತ, ಮೊದೂರು ತೋಟದ ಮಾಲೀಕ ತಿಮ್ಮಯ್ಯ ಹಾಜರಿದ್ದರು. ಸಂಘಟನೆಯ ಮಹಿಳಾ ಘಟಕದ ಸಂಚಾಲಕಿ ಪ್ರೇಮ ಕೃಷ್ಣಪ್ಪ ಸ್ವಾಗತಿಸಿದರು, ಆರತಿ ನಿರೂಪಿಸಿದರು, ಶಿಕ್ಷಕಿ ಭಾರತಿ ವಂದಿಸಿದರು.