ಸೋಮವಾರಪೇಟೆ, ಜು. ೧೧: ತಾಲೂಕಿನ ನಿಡ್ತ ಗ್ರಾಮ ಪಂಚಾಯಿತಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕರುಂಬಯ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತಕ್ಕೆ ಪರ್ಯಾಯವಿಲ್ಲದ ಕಾರಣ ದಾನಿಗಳಿಂದಲೇ ರಕ್ತವನ್ನು ಸಂಗ್ರಹಿಸಬೇಕಾಗಿದೆ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು ಹಾಗೂ ದಾನಿಯ ಆರೋಗ್ಯವೂ ವೃದ್ಧಿಸುತ್ತದೆ. ಹೃದಯ ಸಂಬAಧಿ ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿದ್ದು ಪ್ಲೇಟ್‌ಲೆಟ್ಸ್ ಅವಶ್ಯಕವಾಗಿ ಕೊಡಬೇಕಾಗಿದೆ. ನೆಗೆಟಿಕ್ ಗುಂಪಿನ ರಕ್ತದ ಕೊರತೆಯಾಗಿದೆ. ಅಪರೂಪ ರಕ್ತವನ್ನು ಹೊಂದಿರುವ ದಾನಿಗಳು ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಒಟ್ಟು ೨೫ ಮಂದಿ ರಕ್ತದಾನ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮನು, ಮುಖ್ಯ ಶಿಕ್ಷಕಿ ರೇಣುಕಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಬಲ್ಕಿಸ್ ಬಾನು, ಧರಣೇಶ್ ರಾಜ್ ಇದ್ದರು.