ಗೋಣಿಕೊಪ್ಪಲು, ಜು. ೧೧: ಸಾವಿರಾರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉತ್ತಮ ಉದ್ಯೋಗ ಹಾಗೂ ರಾಜಕಾರಣವನ್ನು ಅನುಭವಿಸಿದ ಗ್ರಾಮೀಣ ಭಾಗದ ದ.ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯು ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದ್ದು, ೨೦೨೪ರ ನವೆಂಬರ್ ತಿಂಗಳ ಕೊನೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾಕಾವೇರಿ ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಮರಣ ಸಂಚಿಕೆ ಹೊರ ತರಲು ಆಡಳಿತ ಮಂಡಳಿಯು ಒಮ್ಮತದ ನಿರ್ಧಾರ ಕೈಗೊಂಡಿದೆ. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಕೆ.ಟಿ.ಟಿಪ್ಪು ಬಿದ್ದಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆಯ ಸಮಿತಿಯ ಅಧ್ಯಕ್ಷ ಸಣ್ಣುವಂಡ ಎಂ.ವಿಶ್ವನಾಥ್ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಜನೆ ಪೂರೈಸಿ ಇಂದಿಗೂ ದೇಶ ಹಾಗೂ ವಿದೇಶಗಳಲ್ಲಿ ಹಲವು ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ರಾಜಕೀಯವಾಗಿಯೂ ಸೇವೆ ನೀಡಿದವರು ಈ ಶಾಲೆಯಿಂದ ವಿದ್ಯಾಭ್ಯಾಸ ಕಲಿತು ಮುಂದೆ ಬಂದಿದ್ದಾರೆ. ಇಂತಹ ಗ್ರಾಮೀಣ ಭಾಗದ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ.

೧೯೨೪ನೇ ಇಸವಿಯಲ್ಲಿ ಬ್ರಿಟಿಷ್ ಸರ್ಕಾರವಿದ್ದ ಸಂದರ್ಭ ಆರಂಭವಾದ ಈ ಶಾಲೆಯು ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿ ನಡೆಯುತ್ತಿತ್ತು. ಊರಿನ ಪ್ರಮುಖರ,ಹಿರಿಯರ ಇಚ್ಚಾಶಕ್ತಿ ಯಿಂದ ೧೯೫೬ರಲ್ಲಿ ಪ್ರಸ್ತುತ ಇರುವ ೬ ಎಕರೆ ವಿಸ್ತೀರ್ಣ ಜಾಗದಲ್ಲಿ ಶಾಲೆ ಆರಂಭಗೊAಡಿದೆ. ೨೦೨೪ಕ್ಕೆ ೧೦೦ ವರ್ಷ ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ಶತಮಾನೋತ್ಸವ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಒಸ್ಯಾಟ್ ಸಂಸ್ಥೆ ಸಹಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ೪ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇನ್ನು ಕೂಡ ೪ ಕೊಠಡಿಗಳ ಅವಶ್ಯಕತೆ ಈ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಶತಮಾನೋತ್ಸವ ಸವಿ ನೆನಪಿನಲ್ಲಿ ಸ್ಮರಣ ಸಂಚಿಕೆ ಹೊರ ತರಲಿದ್ದೇವೆ. ಸಮಿತಿಗೆ ಹಲವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಚಿಕೆಗೆ ಸಾರ್ವಜನಿಕರಿಂದ ಕಥೆ, ಕವನ, ವೈಚಾರಿಕ ಲೇಖನ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಸಮಯದೊಳಗೆ ಕಳುಹಿಸಿಕೊಡುವಂತೆ ತಿಳಿಸಿದರು.

ಸಭೆಯಲ್ಲಿದ್ದ ಸದಸ್ಯರಾದ ಸಣ್ಣುವಂಡ ಕಿಶೋರ್ ನಾಚಪ್ಪ, ಪಿ.ವಿ.ಶ್ರೀಧರ್, ಕಿಸುದೇವಯ್ಯ, ಸಂಚಿಕೆ ಬಿಡುಗಡೆ ವಿಷಯದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ ಅಗತ್ಯ ಮಾಹಿತಿ ಒದಗಿಸಿದರು. ಅಧ್ಯಕ್ಷತೆ ವಹಿಸಿದ್ದ ಟಿಪ್ಪು ಬಿದ್ದಪ್ಪ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸೋಫಿಯ, ಶಿಕ್ಷಕರಾದ ಎಂ.ಟಿ. ಸತ್ಯ, ಪಿ.ವಿ. ಲಾಯ್ಡ್, ಡಿ.ಯು. ರಾಗಿಣಿ, ಎಂ.ಕೆ.ಲೀಲಾ, ಎಂ.ಟಿ. ಸುಮ, ಎಂ.ಬಿ. ಸಹನ ಹಾಗೂ ಲಾವಣ್ಯ ಉಪಸ್ಥಿತರಿದ್ದರು.