೪ಮಡಿಕೇರಿ, ಜು. ೧೧: ಪಾರಂಪರಿಕವಾಗಿ ಬಂದ ವನ್ಯಜೀವಿ ಉತ್ಪನ್ನವನ್ನು ಅರಣ್ಯ ಇಲಾಖೆಯ ಸ್ವಾಧೀನಕ್ಕೆ ಒಪ್ಪಿಸಬೇಕೆಂದು ಹೊರಡಿಸಿದ್ದ ರಾಜ್ಯ ಸರಕಾರದ ಅಧಿಸೂಚನೆಗೆ ಇದೀಗ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಉತ್ಪನ್ನಗಳನ್ನು ಅರಣ್ಯ ಇಲಾಖೆಗೆೆ ಒಪ್ಪಿಸಲು ತಾತ್ಕಾಲಿಕ ತಡೆ ದೊರೆತಂತಾಗಿದೆ.

ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರಕಾರ ಅರಣ್ಯ ವನ್ಯಜೀವಿ ಉತ್ಪನ್ನಗಳನ್ನು ಕರ್ನಾಟಕ ವನ್ಯಜೀವಿ ನಿಯಮ ೨೦೨೪ರ ಅಧಿನಿಯಮದ ಅನುಸಾರ ೯.೪.೨೦೨೪ರೊಳಗೆ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ಅಧಿಸೂಚನೆ ಹೊರಡಿಸಿತ್ತು. ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಅಘೋಷಿತ ವನ್ಯಜೀವಿ ಅಂಗಾಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿ ಇತ್ಯಾದಿಗಳನ್ನು ಇಟ್ಟುಕೊಂಡಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅಡಿಯಲ್ಲಿ ೭ ವರ್ಷಗಳವರಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಸರಕಾರ ಎಚ್ಚರಿಸಿತ್ತು.

೧೯೭೨ರ ವನ್ಯಜೀವಿ ಸಂರಕ್ಷಣೆ ಕಾಯಿದೆ ಅನ್ವಯ ೧೯೭೨ ಇಸವಿಗೂ ಮುನ್ನವಿದ್ದ ಅರಣ್ಯ ಉತ್ಪನ್ನಗಳನ್ನು ಘೋಷಿಸಿಕೊಳ್ಳಲು ೨೦೦೩ರಲ್ಲಿಯೂ ಅವಕಾಶ ಕಲ್ಪಿಸಲಾಗಿತ್ತು. ಆ ಸಂದರ್ಭ ಘೋಷಿಸಿಕೊಂಡವರಿಗೆ ಇಲಾಖೆಗೆ ಒಪ್ಪಿಸುವುದರಿಂದ ವಿನಾಯಿತಿಯೂ ಇತ್ತು.

ಕೊಡಗು ಜಿಲ್ಲೆಯಲ್ಲಿ ಅರಣ್ಯ ವನ್ಯಜೀವಿ ಉತ್ಪನ್ನಗಳು ಧಾರ್ಮಿಕ ವಿಚಾರಗಳಲ್ಲಿ ಬಳಕೆಯಾಗುತ್ತವೆÉ. ಜೊತೆಗೆ ತಲತಲಾಂತರಗಳಿAದ ಬಳುವಳಿಯಾಗಿ ಬಂದ ಉತ್ಪನ್ನವನ್ನು ಹಿಂದಿರುಗಿಸಲು ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಈ ಹಿನ್ನೆಲೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನ್ಯಾಯಾಲಯದ ಮೂಲಕ ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದ್ದರು.

ಅದಾದ ನಂತರ ಪೊನ್ನಣ್ಣ ಅವರ ಮೂಲಕ ಪಟ್ಟಡ ರಂಜಿ ಪೂಣಚ್ಚ ಹಾಗೂ ಕೋಡಿಮಣಿಯಂಡ ಕುಟ್ಟಪ್ಪ ಅವರುಗಳು

(ಮೊದಲ ಪುಟದಿಂದ) ನ್ಯಾಯಾಂಗದ ಮೊರೆ ಹೋದರು. ವಕೀಲ ಕೊಟ್ಟಂಗಡ ಸೋಮಣ್ಣ ಅವರು ವಾದ ಮಂಡಿಸಿ ಈ ನಿಯಮಕ್ಕೆ ತಡೆ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆ ಅರ್ಜಿದಾರರು ಇಲಾಖೆಗೆ ಉತ್ಪನ್ನ ಹಿಂದಿರುಗಿಸುವುದಕ್ಕೆ ತಡೆ ನೀಡಿತ್ತು.

ಅರ್ಜಿದಾರರಿಗೆ ಮಾತ್ರವಲ್ಲ ಇಡೀ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂಬ ಕೊಟ್ಟಂಗಡ ಸೋಮಣ್ಣ ಅವರ ವಾದಕ್ಕೆ ನ್ಯಾಯಾಲಯ ಇದೀಗ ಒಪ್ಪಿಗೆ ನೀಡಿ, ಮುಂದಿನ ವಿಚಾರಣೆ ತನಕ ಅಧಿಸೂಚನೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಡೆಯಾಜ್ಞೆ ನೀಡಿದ್ದಾರೆ. ತಾ. ೨೪ ರಂದು ಮುಂದಿನ ವಿಚಾರಣೆ ನಡೆಯಲಿದೆ.

‘ತಡೆ ದೊರೆತಿರುವ ಹಿನ್ನೆಲೆ ಸದ್ಯಕ್ಕೆ ಅರಣ್ಯ ಉತ್ಪನ್ನ ಹಿಂದಿರುಗಿಸುವ ಅವಶ್ಯಕತೆ ಇಲ್ಲ’ ಎಂದು ವಕೀಲ ಸೋಮಣ್ಣ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

- ಹೆಚ್. ಜೆ. ರಾಕೇಶ್