ರೂ. ೭೨ ಕೋಟಿ ಟೆಂಡರ್ ಪ್ರಕ್ರಿಯೆ ಮುಕ್ತಾಯ

ಕೂಡಿಗೆ, ಜು. ೧೧: ಹಾರಂಗಿ ಅಣೆಕಟ್ಟೆಯ ಮುಂಭಾಗದಿAದ ಈಗಾಗಲೇ ಮದಲಾಪುರದ ವರೆಗೆ ಮುಖ್ಯ ನಾಲೆಯ ಎರಡೂ ಬದಿಗಳ ಕಾಂಕ್ರೀಟಿಕರಣ, ಉಪ ಸೇತುವೆಯ ನಿರ್ಮಾಣ, ಸೇರಿದಂತೆ ಕಟ್ ಅಂಡ್ ಕವರ್‌ನ ಕಾಮಗಾರಿಯು ನಡೆದ ಹಿನ್ನೆಲೆಯಲ್ಲಿ ಅದೇ ಮಾದರಿಯಲ್ಲಿ ಮುಖ್ಯ ನಾಲೆಯ ಎರಡನೇ ಹಂತದ ಉಳಿದ ಕಾಮಗಾರಿಗೆ ರೂ. ೭೨.ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ಹಂತದಲ್ಲಿ ನಾಲೆಯ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಸೂಚನೆಯಂತೆ ಮದಲಾಪುರದಿಂದ ಭುವನಗರಿವರೆಗಿನ ಉಳಿದ ಮುಖ್ಯ ನಾಲೆಯ ಕಾಮಗಾರಿಯ ಕ್ರಿಯಾ ಯೋಜನೆಯ ಪಟ್ಟಿಯನ್ನು ತಯಾರಿಸಿ ರಾಜ್ಯ ನೀರಾವರಿ ಇಲಾಖೆಗೆ ಕಳುಹಿಸಲಾಗಿತ್ತು. ರಾಜ್ಯ ಕಾವೇರಿ ನೀರಾವರಿ ನಿಗಮದ ಮೂಲಕ ಹಣ ಬಿಡುಗಡೆ ಆದ ಹಿನ್ನೆಲೆಯಲ್ಲಿ ರೂ ೭೨. ಕೋಟಿ ವೆಚ್ಚದ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ರಾಜ್ಯಮಟ್ಟದಲ್ಲಿ ನಡೆದಿದೆ.

ಈ ಸಾಲಿನ ಮುಂದಿನ ದಿನಗಳಲ್ಲಿ ನಾಲೆಯ ಮೂಲಕ ಜಿಲ್ಲೆ, ಮತ್ತು ಮೈಸೂರು, ಹಾಸನ ಜಿಲ್ಲೆಯ ರೈತರ ಬೇಸಾಯಕ್ಕೆ ನೀರು ಹರಿಸುವ ಎಲ್ಲಾ ಸಿದ್ದತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಸಾಲಿನಲ್ಲಿ ಎರಡನೇ ಹಂತದ ನಾಲೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಐ. ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.