ವೀರಾಜಪೇಟೆ, ಜು. ೧೧: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಮದ್ಯಪಾನದ ಗುಂಗಿನಲ್ಲಿದ್ದ ಅಪ್ರಾಪ್ತ ಬಾಲಕÀ ತನ್ನ ಅಜ್ಜಿಯನ್ನು ಹತ್ಯೆಗೈದ ಘಟನೆ ವೀರಾಜಪೇಟೆ ಹೊರವಲಯ ಬೇಟೋಳಿ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮ ನಿವಾಸಿ ಗಣೇಶ್ ಅವರ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಯರವರ ಅಪ್ಪು ಅವರ ಪತ್ನಿ ಜಾನಕಿ (೪೮) ಮೊಮ್ಮಗನಿಂದ ಹತ್ಯೆಯಾದ ಅಜ್ಜಿ.

ಬೇಟೋಳಿ ಗ್ರಾಮದ ನಿವಾಸಿ ಗಣೇಶ್ ಎಂಬುವವರ ಲೈನ್ ಮನೆಯಲ್ಲಿ ಮೃತ ಹೊಂದಿದ ಜಾನಕಿ ಕುಟುಂಬ ನೆಲೆಸಿತ್ತು. ಸುಮಾರು ೨ ವರ್ಷಗಳಿಂದ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತಿದ್ದರು. ಮೃತ ಮಹಿಳೆಗೆ ಎರಡು ಮಕ್ಕಳಿದ್ದಾರೆ. ಮೃತ ಮಹಿಳೆ ಮಗ ಅಯ್ಯಪ್ಪನ ಮಗ ಹಾಗೂ ಅಪ್ರಾಪ್ತ ಹುಡುಗ ಮನೆಯಲ್ಲಿ ವಾಸವಿದ್ದರು. ಪತಿ ತಾ.೧೦ರ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದಾರೆ. ಮೃತ ಮಹಿಳೆ, ಪತಿ ಅಪ್ಪು ಅವರು ಮನೆಯಲ್ಲೇ ಇದ್ದರು. ಈ ಸಂದರ್ಭದಲ್ಲಿ ಮನೆಯ ಮಂದಿ ಎಲ್ಲರೂ ಮದ್ಯಪಾನ ಮಾಡಿದ್ದಾರೆ. ಮದ್ಯದ ಗುಂಗಿನಲ್ಲಿ ನಾಲ್ವರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಜಗಳವು ವಿಪರೀತ ಮಟ್ಟಕ್ಕೆ ತೆರಳಿದ ಸಂದರ್ಭ ಮೃತ ಮಹಿಳೆಯ ಪತಿ ಅಪ್ಪು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಮನೆಯಿಂದ ತೆರಳಿದ್ದಾರೆ. ಪೊಲೀಸ್ ಠಾಣೆಗೆ ತೆರಳಿದ ವ್ಯಕ್ತಿ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವ ವೇಳೆಯಲ್ಲಿ ಮಹಿಳೆ ಮೃತರಾಗಿರುವುದು ಗೋಚರಿಸಿದೆ. ಬಳಿಕ ಪೊಲೀಸರು ಪ್ರಾಥಮಿಕ ಹಂತದ ತನಿಖೆ ನಡೆಸಿದ್ದಾರೆ. ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ನೇತೃತ್ವದಲ್ಲಿ ನಗರ ಪ್ರಬಾರ ಠಾಣಾಧಿಕಾರಿ ವಾಣಿಶ್ರೀ ಅವರುಗಳೊಂದಿಗೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖೆಯಲ್ಲಿ ಅಪ್ರಾಪ್ತನಿಂದ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸೌದೆಯಿಂದ ಹಲ್ಲೆ ನಡೆಸಿದ ಸಂದರ್ಭ ಗಂಭೀರ ಪೆಟ್ಟಿನಿಂದಾಗಿ ಜಾನಕಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಮೈಸೂರಿನ ವಿಧಿ ವಿಜ್ಞಾನ ವಿಭಾಗದ ತಜ್ಞರು ಆಗಮಿಸಿ ಮಹಜರು ಮತ್ತು ಇತರ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಬಂಧಿತ ಅಪ್ರಾಪ್ತನನ್ನು ಮೈಸೂರು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ವೀರಾಜಪೇಟೆ ನಗರ ಠಾಣೆಯಲ್ಲಿ ಅಪ್ಪು ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಉದ್ದೇಶ ರಹಿತ ಕೊಲೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.