ಮಡಿಕೇರಿ, ಜು.೧೧ : ವೀರಾಜಪೇಟೆ ತಾಲೂಕಿನ ವೀರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ ೧೬.೪೦ ರಲ್ಲಿ ರಸ್ತೆ ಬದಿ ಬಿರುಕು ಬಿಟ್ಟು ಕುಸಿಯುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ರ ಕಲಂ ೧೬೩ ಮತ್ತು ಮೋಟಾರು ವಾಹನ ಕಾಯ್ದೆ ೧೯೮೮ರ ಕಲಂ ೧೧೫ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು ೧೯೮೯ರ (ತಿದ್ದುಪಡಿ ನಿಯಮಗಳು ೧೯೯೦) ನಿಯಮ ೨೨೧ಎ(೫)ರಲ್ಲಿ ದತ್ತವಾದ ಅಧಿಕಾರದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ ೯ ರವರೆಗೆ (ದಿನಾಂಕ ೦೯.೦೯.೨೦೨೪ರ ವರೆಗೆ) ವೀರಾಜಪೇಟೆ ತಾಲೂಕಿನ ವೀರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ತೆರಮೆಮೊಟ್ಟೆಯ (ಸರಪಳಿ ಕಿ.ಮೀ ೧೬.೪೦ ತೋರ ಹತ್ತಿರ) ಕುಸಿದಿರುವ ಭಾಗದಲ್ಲಿನ ೪೦೦ ಮೀಟರ್ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ಸಾರ್ವಜನಿಕರು ತೋರ-ಕೆದಮುಳ್ಳೂರು-ಬೋಯಿಕೇರಿ ಮಾರ್ಗ, ತೋರ-ಹೆಗ್ಗಳ-ಆರ್ಜಿ ಮಾರ್ಗವಾಗಿ ಬದಲಿ ರಸ್ತೆ ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.