ನಾಪೋಕ್ಲು, ಜು. ೧೧: ರೈತರು ಕೃಷಿ ಚಟುವಟಿಕೆಯಲ್ಲಿ ತಾಂತ್ರಿಕತೆ ಬಳಸಿಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಅಭಿವೃದ್ಧಿ ಹೊಂದಬಹುದು ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಎ.ಸಿ ಗಿರೀಶ್ ಹೇಳಿದರು.

ನಾಪೋಕ್ಲು ಸಹಕಾರ ಮಹಿಳಾ ಸಮಾಜದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಕೃಷಿ ಇಲಾಖೆ ವತಿಯಿಂದ ಅತ್ಮ ಯೋಜನೆಯಡಿ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಲಕ್ಕೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಕೃಷಿ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಸಿಗುವ ಹಲವು ಯಂತ್ರೋಪಕರಣಗಳ ಬಗ್ಗೆ ಹಾಗೂ ಬೆಳೆ ವಿಮೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು .

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆಂಚರೆಡ್ಡಿ ಮಾತನಾಡಿ, ಭತ್ತದ ಬೀಜೋಪಚಾರ ಮತ್ತು ಸುರಕ್ಷಿತ ಕೀಟನಾಶಕ ಬಳಕೆಯ ಕುರಿತು ಮಾಹಿತಿ ನೀಡಿದರು. ಭತ್ತದ ಬೆಳೆಯಲ್ಲಿ ಬರುವ ವಿವಿಧ ರೋಗಗಳ ನಿರ್ವಹಣೆಯ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರು. ಜಿಲ್ಲಾ ಸಂಯೋಜಕಿ ಕುಮುದ ಮಾತನಾಡಿ, ಕಿರು ಆಹಾರ ಸಂಸ್ಕರಣೆಯ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ರೇಷ್ಮಾ ಉತ್ತಪ್ಪ ಉದ್ಘಾಟಿಸಿದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಕೆ.ಎಸ್. ಮೋನಿಕ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪಿ.ಎಚ್ ಮೋನಿಷಾ ಉಪಸ್ಥಿತರಿದ್ದರು. ಮಹಿಳಾ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ಭಾಗವಹಿದ್ದರು.