ಮುಳ್ಳೂರು, ಜು. ೧೧: ಮಾದಕ ವಸ್ತುಗಳ ಜಾಲ ಹಳ್ಳಿ ಹಳ್ಳಿಗಳಲ್ಲಿ ವ್ಯಾಪಿಸಿದ್ದು, ಈ ವಿಚಾರದಲ್ಲಿ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು. ಅವರು ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಸಮೀಪದ ಶನಿವಾರಸಂತೆ ಭಾರತಿ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ನಡೆದ ಮಾಹಿತಿ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತುಗಳ ಜಾಲ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಿಸಿದ್ದು ಯುವ ಸಮೂಹ ಮಾದಕ ವಸ್ತುಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾರೂ ಜಾಗೃತರಾಗಬೇಕು. ಹಳ್ಳಿ ಹಳ್ಳಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜನರಿಗೆ ಅರಿವು ಮೂಡಿಸುವುದರಿಂದ ಮಾದಕ ವಸ್ತುಗಳ ಜಾಲವನ್ನು ತಡೆಗಟ್ಟಬಹುದಾಗಿದೆ ಎಂದರು.

ಶನಿವಾರಸAತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ವಿದ್ಯಾರ್ಥಿ ಮತ್ತು ಯುವ ಸಮೂಹ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಸಹ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಿ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತರಾಗಿ ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ಮಾದಕ ವಸ್ತು ಸೇವನೆ ಸೇರಿದಂತೆ ಇತರ ದುಶ್ಚಟಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ದುಶ್ಚಟಗಳಿಂದ ಸಾವು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ದುಶ್ಚಟಗಳಿಂದ ದೂರ ಇರುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರದ ಅಧ್ಯಕ್ಷ ರಕ್ಷಿತ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಅಶೋಕ್ ಮಾತನಾಡಿದರು. ಈ ಸಂದರ್ಭ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಒಕ್ಕೂಟದ ಅಧ್ಯಕ್ಷೆ ಶಾಹಿನ್ ತಾಜ್, ಸೇವಾ ಪ್ರತಿನಿಧಿ ಎಸ್.ಆರ್. ಶೋಭಾವತಿ, ವನಿತ, ಉಪನ್ಯಾಸಕಿ ಮಧು, ಮುಂತಾದವರು ಹಾಜರಿದ್ದರು.