ಕೂಡಿಗೆ, ಜು. ೧೨: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸ್ವಚ್ಛತೆಯ ಬಗ್ಗೆ ಅರಿವು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಕೆ. ಪ್ರಕಾಶ್ ವಹಿಸಿ ಮಾತನಾಡಿ, ಮಕ್ಕಳು ಆರೋಗ್ಯದ ಕಡೆ ಯಾವಾಗಲೂ ಹೆಚ್ಚು ಗಮನ ಹರಿಸಬೇಕು. ಶಾಲಾ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಅವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತವನ್ನಾಗಿ ನಮ್ಮ ಶಾಲೆಯ ಸ್ವಚ್ಛ ಪರಿಸರವನ್ನು ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಡೆಂಗ್ಯೂ ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂದು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಶ್ ಅವರು ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆ, ಸೊಳ್ಳೆಗಳ ಉತ್ಪತ್ತಿಯ ಬಗ್ಗೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಬಗ್ಗೆ ಮಾಹಿತಿಯನ್ನು ನೀಡಿದರು,

ಶಾಲೆಯ ಶುಶ್ರೂಷಾಧಿಕಾರಿ ಮೀನಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಮಾಹಿತಿಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಮುಕೇಶ್, ಶಾಲಾ ಶಿಕ್ಷಕರಾದ ಚಿದಂಬರ್, ನಾಗೇಂದ್ರ, ಮಂಜು, ದಿನೇಶ್‌ಚಾರಿ, ಹರಿಣಾಕ್ಷಿ, ತ್ರಿವೇಣಿ, ಗಾನವಿ, ನಿಲಯ ಪಾಲಕ ಜಗದೀಶ್ ಹಾಜರಿದ್ದರು.