ಶನಿವಾರಸಂತೆ, ಜು. ೧೨ : ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪ ವಿಭಾಗಗಳಲ್ಲೂ ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಿನೇದಿನೇ ಅಧಿಕಗೊಳ್ಳುತ್ತಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಆರೋಗ್ಯ ಇಲಾಖೆ ವತಿಯಿಂದ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದು, ಮನೆಯ ಒಳ-ಹೊರಗಿನ ಸ್ವಚ್ಛತೆಯನ್ನು ಪರಿಶೀಲಿಸಿ, ಸಾರ್ವಜನಿಕರಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.

`ಸಾರ್ವಜನಿಕರು ತಮ್ಮ ಮನೆಗಳ ಸುತ್ತಲಿನ ಪರಿಸರದಲ್ಲಿ ಬಾಟಲಿ, ತೆಂಗಿನ ಚಿಪ್ಪು, ಡ್ರಮ್, ನೀರಿನ ತೊಟ್ಟಿ ಮತ್ತಿತರ ಪರಿಕರಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಿ, ಸ್ವಚ್ಛಗೊಳಿಸುತ್ತಿರಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗು ವುದರಿಂದ ಅಂತಹ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು’ ಎಂದು ಆಶಾ ಕಾರ್ಯಕರ್ತೆಯರು ಸಲಹೆ ನೀಡುತ್ತಾ ತಾವೇ ಸ್ವಚ್ಛತಾ ಕಾರ್ಯಕ್ಕೂ ಮುಂದಾಗುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಮೀಪ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದ್ದು ಲಿಫ್ಟ್ ನಿರ್ಮಾಣಕ್ಕೆ ಮಾಡಿದ್ದ ಗುಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ನೀರು-ಮದ್ಯದ ಬಾಟಲಿಗಳು, ಮತ್ತಿತರ ತ್ಯಾಜ್ಯಗಳು ನಿಂತ ನೀರಿನಲ್ಲಿ ತೇಲಾಡುತ್ತಿದ್ದು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಗಮನಕ್ಕೆ ಈ ವಿಚಾರ ತರಲಾಗಿದೆ.

ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಪ್ರವೀಣ್, ೧೦ ಮಂದಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಡೆಂಗ್ಯೂ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಪಟ್ಟಣದಲ್ಲಿ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಿವೆ. ಆರೋಗ್ಯ ಕೇಂದ್ರದಲ್ಲಿ ೫-೬ ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ಉಲ್ಬಣಗೊಂಡ ಇಬ್ಬರು ರೋಗಿಗಳನ್ನು ಹಾಸನ ಆಸ್ಪತ್ರೆಗೆ ಕಳುಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೂ ಕಳುಹಿಸಲಾಗುವುದು. ಸಾರ್ವಜನಿಕರು ಮನೆಯ ಆವರಣ, ಚರಂಡಿಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಗ್ರಾಮ ನೈರ್ಮಲ್ಯದ ಬಗ್ಗೆ ಪಂಚಾಯಿತಿಯ ಪಾತ್ರವೂ ಮುಖ್ಯವಾಗಿದ್ದು ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಆಶೋಕ್ ತಿಳಿಸಿದ್ದಾರೆ.