ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಜು. ೧೨: ಪ್ರಕೃತಿಯ ತವರೂರಾದ ಕೊಡಗಿನಲ್ಲಿ ಪರಿಸರದ ವಿಚಾರಗಳೇ ‘ಮಗ್ಗುಲ ಮುಳ್ಳಾಗಿ’ ಚುಚ್ಚುತ್ತ ಜನರನ್ನು ಚಿಂತೆಗೀಡಾಗುವAತೆ ಮಾಡುತ್ತಿದೆ. ಕಸ್ತೂರಿ ರಂಗನ್ ವರದಿ, ಸೂಕ್ಷö್ಮ ಪ್ರದೇಶ, ಬಫರ್ ಝೋನ್ ಹೀಗೆ ಹಲವು ನೀತಿಗಳಿಗೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ಇತ್ತು. ಈಗಲು ಮುಂದುವರೆದಿದೆ. ಇದೀಗ ಆ ಸಾಲಿಗೆ ಮತ್ತೊಂದು ಪರಿಸರದ ವಿಷಯ ಸೇರ್ಪಡೆಗೊಂಡಿದೆ. ಕೊಡಗಿನ ವಿವಿಧ ಪಂಚಾಯಿತಿ ವ್ಯಾಪ್ತಿಯ ಜಾಗಗಳನ್ನು ಮೀಸಲು ಅರಣ್ಯ ಮಾಡಬೇಕೆಂಬ ಕುರಿತ ಪ್ರಕ್ರಿಯೆಗಳು ಗರಿಗೆದರಿವೆ. ಈ ಕುರಿತು ಬಂದಿರುವ ಪತ್ರ ತಲ್ಲಣ ಸೃಷ್ಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಯಾವ ಆಯಾಮ ತೆಗೆದುಕೊಳ್ಳುತ್ತದೆ ಎಂಬ ಗೊಂದಲ ಜನರಲ್ಲಿ ಉದ್ಭವಿಸಿದೆ.

ರಾಜ್ಯ ಸರಕಾರ ಅಧೀನದ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಯಿಂದ ಜಿಲ್ಲೆಯ ವಿವಿಧ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೆಲವೊಂದು ಜಾಗಗಳ ಸರ್ವೆ ನಂಬರ್ ಉಲ್ಲೇಖಿಸಿ ಅದಕ್ಕೆ ಸಂಬAಧಿಸಿದAತೆ ವರದಿ ನೀಡುವಂತೆ ಪತ್ರ ರವಾನೆಯಾಗಿದ್ದು, ಅದರಲ್ಲಿರುವ ಅಂಶಗಳಿಗೆ ಕೊಡಗಿನ ಜನರಿಂದ ವ್ಯಾಪಕ ವಿರೋಧ ಉಂಟಾಗುತ್ತಿದೆ.

ನಿವೃತ್ತ ಕೆ.ಎ.ಎಸ್. ಅಧಿಕಾರಿ ರೇಣುಕಾಂಬ ಅವರು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಯಾಗಿ ಹುದ್ದೆ ಅಲಂಕರಿಸಿದ್ದು, ಜೂನ್ ೧೪ ರಂದು ‘ಮೀಸಲು ಅರಣ್ಯ ಘೋಷಣೆ’ ಕುರಿತ ವಿಷಯನ್ನು ಅಧರಿಸಿ ಪತ್ರವನ್ನು ಜಿಲ್ಲೆಯ ವಿವಿಧ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಇದರ ಪ್ರತಿಯನ್ನು ಜಿಲ್ಲೆಯ ಅರಣ್ಯ ಇಲಾಖೆ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಭೂದಾಖಲೆಗಳ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಲೆಕ್ಕಾಧಿಕಾರಿಗಳಿಗೂ ರವಾನಿಸಿದ್ದಾರೆ.

(ಮೊದಲ ಪುಟದಿಂದ)

ಪತ್ರದಲ್ಲಿ ಏನಿದೆ?

ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿ ಮೈಸೂರು ವಿಭಾಗ ಎಂಬ ‘ಲೆಟರ್ ಹೆಡ್’ನಲ್ಲಿ ರೇಣುಕಾಂಬ ಅವರು ಬರೆದ ಪತ್ರದಲ್ಲಿ ‘ಮೀಸಲು ಅರಣ್ಯ ಘೋಷಿಸುವ’ ಕುರಿತ ವಿಷಯ ವಸ್ತು ಹೊಂದಿದೆ.

ಉದಾಹರಣೆಗೆ ‘ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದ ಸರ್ವೆ ನಂಬರ್ ೧/೧ರ ಒಟ್ಟು ೯೩.೧೧ ಹೆಕ್ಟೇರ್ ಪ್ರದೇಶದ ಜಮೀನುಗಳನ್ನು ಕರ್ನಾಟಕ ಅರಣ್ಯ ಅಧಿನಿಯಮ ೧೯೬೩ ಕಲಂ-೦೫ ರ ಅನ್ವಯ ಮೀಸಲು ಅರಣ್ಯ ಘೋಷಿಸಿ ಅಧಿಸೂಚನೆ ಹೊರಡಿಸುವ ಕುರಿತು’ ಎಂಬ ವಿಷಯವಿರುವ ಪತ್ರ ಬಂದಿದೆ.

ಈ ರೀತಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್‌ಗಳನ್ನು ಉಲ್ಲೇಖಿಸಿ ಸಾವಿರಾರು ಹೆಕ್ಟೇರ್ ಪ್ರದೇಶಗಳ ಭೂ ಮಾಹಿತಿಯನ್ನು ನೀಡುವಂತೆ ಪತ್ರದ ಮೂಲಕ ಸೂಚಿಸಲಾಗಿದೆ.

ಕಾನೂರು, ಹೊಸಕೋಟೆ ಬಿಳುಗುಂದ, ನಿಟ್ಟೂರು, ಕೊಟ್ಟಗೇರಿ, ಹೊಸೂರು, ಮುಕ್ಕೋಡ್ಲು, ಹೆಗ್ಗಡಹಳ್ಳಿ, ಮೊಣ್ಣಂಗೇರಿ, ಕುಂಬಾರಗಡಿಗೆ, ಆಲೂರು ಹೊಸಹಳ್ಳಿ, ಹೊಸಬೀಡು ಸೇರಿದಂತೆ ಇನ್ನಿತರ ಭಾಗಗಳ ಸರ್ವೆ ನಂಬರ್‌ಗಳ ಜಾಗಗಳ ವಸ್ತುಸ್ಥಿತಿಯ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ.

ವರದಿ ನೀಡಲು ಸೂಚನೆ

ಜಮೀನುಗಳ ಪಹಣಿ ಪತ್ರದಲ್ಲಿ ಕಬ್ಬೆದಾರರ ಕಲಂನಲ್ಲಿ ಅರಣ್ಯ ಎಂದು ದಾಖಲೆ ಇದ್ದು, ಸದರಿ ಜಮೀನುಗಳಲ್ಲಿ ಅನಧಿಕೃತ ಅಥವಾ ಅಧಿಕೃತವಾಗಿಯಾಗಲಿ, ಸಾರ್ವಜನಿಕರು ಸಾಗುವಳಿ ಮಾಡುತ್ತಿದ್ದರೆ ಹಾಗೂ ಯಾರಿಗಾದರೂ ಮಂಜೂರಾತಿಯಾಗಿದೆಯೇ, ಸಾರ್ವಜನಿಕ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗಿದೆಯೇ ಎನ್ನುವ ಕುರಿತು ಮಾಹಿತಿ ಅವಶ್ಯಕವಾಗಿದ್ದು, ಸ್ಥಾನಿಕವಾಗಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಪತ್ರದಲ್ಲಿ ಅಧಿಕಾರಿ ಸೂಚಿಸಿದ್ದಾರೆ.

ಈ ಪತ್ರ ಬಂದ ಬಳಿಕ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜ್ಞಾಪನ ಹೊರಡಿಸಿ ಮಾಹಿತಿ ನೀಡುವಂತೆ ತಿಳಿಸಿದ್ದು, ಪಂಚಾಯಿತಿ ಪಿಡಿಓಗಳು ಮಾಹಿತಿ ಕಲೆಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.