ಕೂಡಿಗೆ, ಜು. ೧೨: ಮಕ್ಕಳಿಗೆ ತಮ್ಮ ಪ್ರೌಢಶಾಲಾ ಹಂತದಲ್ಲೇ ಆಸಕ್ತಿಗನುಗುಣವಾಗಿ ಗುರಿಯನ್ನು ನಿರ್ಧರಿಸಲು ಹಾಗೂ ಆ ಗುರಿಯ ಹಾದಿಯಲ್ಲಿ ಮುನ್ನಡೆಗೆ ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್ ಕರೆ ನೀಡಿದರು.

ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಹಯೋಗದೊಂದಿಗೆ ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ಸಭಾಂಗಣದಲ್ಲಿ ಎರಡು ದಿನಗಳ ವೃತ್ತಿ ಯೋಜನೆ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆಗೆ ಪುರಸ್ಕಾರ ಎನ್ನುವಂತೆ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದು ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಈ ಕಾರ್ಯಾಗಾರ ಅತ್ಯುತ್ತಮವಾದದ್ದು ಕಾರ್ಯಾಗಾರ ಮತ್ತು ಮಾರ್ಗ ದರ್ಶನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಜಿಲ್ಲಾ ಅಧಿಕಾರಿ, ಸಮನ್ವಯಾಧಿಕಾರಿ ಕೆ.ಡಿ. ನೀತಾ ಮಾತನಾಡಿ, ಬೆಳೆಯುವ ಗಿಡವನ್ನು ಸಸಿ ಇದ್ದಾಗ ಪೋಷಿಸಿದರೆ ಅದು ಹೆಮ್ಮರವಾದ ಮೇಲೆ ಅದ್ಭುತವಾದ ನೆರಳನ್ನು, ಫಲವನ್ನು ಕೊಡುತ್ತದೆ. ಹಾಗೆಯೇ ವಿದ್ಯಾರ್ಥಿಗಳನ್ನು ಬಾಲ್ಯದಿಂದಲೇ ಉತ್ತಮ ವೃತ್ತಿ ಜೀವನ ಕಟ್ಟಿಕೊಳ್ಳುವೆಡೆಗೆ ಅವರನ್ನು ತರಬೇತಿಗೊಳಿಸಿದರೆ ಅವರು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ.

ಕಾರ್ಯಕ್ರಮದಲ್ಲಿ ಅನಾಹತ ಯುನೈಟೆಡ್ ಫರ್ಟ್ಸ್ ಫೌಂಡೇಶನ್ ತರಬೇತುದಾರ ಸಿದ್ದೇಶ್ ಮಾತನಾಡಿದರು. ಈ ಸಂದರ್ಭ ಜಿಲ್ಲೆಯ ಎಲ್ಲಾ ಶಾಲಾ ಪ್ರಾಂಶುಪಾಲರು ಹಾಜರಿದ್ದರು. ನಿರೂಪಣೆಯನ್ನು ಅಧ್ಯಾಪಕ ರಮೇಶ್ ನಡೆಸಿದರು. ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕರಾದ ದಿನೇಶ ಚಾರಿ, ಆಶಿಫ್, ಅಲೋಕ್, ಕೀರ್ತಿ, ಶಬರೀಶ್, ಜಗದೀಶ್, ಸುಶ್ಮಿತಾ ಶಬನ, ಹಸೀನಾ, ಷಮಿಲಿ, ಹಾಜರಿದ್ದರು.