ಮಡಿಕೇರಿ, ಜು. ೧೨: ಮುಡಾ ಹಗರಣದ ವಿರುದ್ಧ ಮೈಸೂರಿಗೆ ಪ್ರತಿಭಟನೆಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರನ್ನು ಮಾರ್ಗಮಧ್ಯೆ ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಮಳೆಯನ್ನೂ ಲೆಕ್ಕಿಸದೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯ ಸರಕಾರದ ನಡೆಯ ಬಗ್ಗೆ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು ಭಾರಿ ಮಳೆಯ ನಡುವೆಯೂ ಪ್ರತಿಭಟಿಸಿ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯ ಸರಕಾರ ಮಾಡಿದ ಹಗರಣದ ಸೂಕ್ತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗೆ ತೆರಳಿದ ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರನ್ನು ಬಂಧಿಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇವೆಲ್ಲ ಸನ್ನಿವೇಶದಿಂದ ಮುಖ್ಯಮಂತ್ರಿ ಹಗರಣದಲ್ಲಿ ಶಾಮೀಲಾಗಿರುವ ಅನುಮಾನ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್ ಕುಮಾರ್, ಮಹೇಶ್ ಜೈನಿ, ಉಪಾಧ್ಯಕ್ಷ ಮನು ಮಂಜುನಾಥ್, ಅರುಣ್ ಶೆಟ್ಟಿ, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಖಜಾಂಜಿ ಕನ್ನಂಡ ಸಂಪತ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ, ನಗರಸಭಾ ಸದಸ್ಯರುಗಳಾದ ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಪ್ರಮುಖರಾದ ಬೆಪ್ಪುರನ ಮೇದಪ್ಪ, ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.