ಸೋಮವಾರಪೇಟೆ, ಜು. ೧೨ : ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕೆ.ಎ. ಆದಂ ಅವರು ಅಧಿಕಾರ ಸ್ವೀಕರಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ತೆರೆಯಲಾಗಿರುವ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಅಧಿಕಾರ ವಹಿಸಿಕೊಂಡ ಆದಂ ಅವರು, ಸೋಮವಾರಪೇಟೆ ಯೋಜನಾ ಪ್ರಾಧಿಕಾರ ರಚನೆಯಾದ ನಂತರದ ಪ್ರಥಮ ಅಧ್ಯಕ್ಷ ಎಂಬ ಸ್ಥಾನಕ್ಕೆ ಭಾಜನರಾದರು.

ಕಳೆದ ೨೦೨೦-೨೧ನೇ ಸಾಲಿನಲ್ಲಿಯೇ ಸೋಮವಾರಪೇಟೆ ಯೋಜನಾ ಪ್ರಾಧಿಕಾರ ರಚನೆ ಪ್ರಕ್ರಿಯೆ ನಡೆದಿದ್ದರೂ, ಅಂತಿಮ ರೂಪುರೇಷೆ ಕಲ್ಪಿಸುವಲ್ಲಿ ಅಂದಿನ ಆಡಳಿತಗಾರರು ವಿಫಲರಾಗಿದ್ದರು. ಶಾಸಕ ಡಾ. ಮಂತರ್ ಗೌಡ ಅವರು ಯೋಜನಾ ಪ್ರಾಧಿಕಾರ ರಚನೆ ಸಂಬAಧ ಮುತುವರ್ಜಿ ವಹಿಸಿದ್ದು, ಸಮಿತಿಗೆ ಅಧ್ಯಕ್ಷರು ಸೇರಿದಂತೆ ಸದಸ್ಯರುಗಳನ್ನು ನೇಮಿಸುವ ಮೂಲಕ ಅಧಿಕೃತವಾಗಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಯಶಸ್ವಿಯಾದರು.

ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಂತರ್ ಗೌಡ, ಕಾನೂನು ಚೌಕಟ್ಟಿನೊಳಗೆ ಪ್ರಾಧಿಕಾರ ಕೆಲಸ ನಿರ್ವಹಿಸಬೇಕಿದೆ. ಕಾನೂನು ಮೀರಿ ಯಾವುದೇ ಕಾರಣಕ್ಕೂ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಅಧಿಕಾರ ಹಾಗೂ ಅವಕಾಶಗಳು ಸಿಕ್ಕಾಗ ಅದನ್ನು ಜನಸೇವೆಗೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಯೋಜನೆ ರೂಪುಗೊಳಿಸಬೇಕು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಬೆರೆಸಬಾರದು ಎಂದು ಸಲಹೆ ನೀಡಿದರು.

ಮಡಿಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾನು ಬದ್ಧವಾಗಿದ್ದು, ಈಗಾಗಲೇ ಸೋಮವಾರಪೇಟೆಯಲ್ಲಿರುವ ಶತಮಾನೋತ್ಸವ ಭವನಕ್ಕೆ ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ. ಪಟ್ಟಣದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್‌ಗೆ ಯೋಜನೆ ರೂಪಿಸಲಾಗುವುದು ಎಂದ ಅವರು, ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಪ.ಪಂ.ನಿAದ ೫ ಏಕರೆ ಜಾಗ ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ನೂತನ ಅಧ್ಯಕ್ಷ ಕೆ.ಎ. ಆದಂ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಒತ್ತಿಕೊಂಡಿರುವ ಬೇಳೂರು ಗ್ರಾ.ಪಂ., ಹಾನಗಲ್ಲು ಹಾಗೂ ಚೌಡ್ಲು ಗ್ರಾ.ಪಂ.ನ ಭಾಗಶಃ ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿವೆ. ೨೫೦೦ ಏಕರೆಗೂ ಅಧಿಕ ಭೂ ಪ್ರದೇಶ ಒಳಗೊಂಡಿದೆ. ಎಲ್ಲರ ಸಹಕಾರದಿಂದ ಕಾರ್ಯಚಟುವಟಿಕೆ ನಡೆಸಲಾಗುವುದು ಎಂದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಸೋಮವಾರಪೇಟೆಯ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ. ಕುಶಾಲನಗರ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಕಾಣುತ್ತಿದೆ. ಸೋಮವಾರಪೇಟೆಯಲ್ಲಿ ಶೈಕ್ಷಣಿಕ, ಔದ್ಯೋಗಿಕ, ಕೈಗಾರಿಕೆ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ವಾಣಿಜ್ಯ ಚಟುವಟಿಕೆ ಹೆಚ್ಚುವಂತೆ ಆಲೋಚಿಸಬೇಕು. ಈ ನಿಟ್ಟಿನಲ್ಲಿ ಈವರೆಗಿನ ಆಡಳಿತಗಾರರ ಇಚ್ಛಾಶಕ್ತಿ ಕೊರತೆಯಿತ್ತು. ಮುಂದೆ ಅಭಿವೃದ್ಧಿ ಹಾಗೂ ಸುಧಾರಣೆಗೆ ಮುಂದಾಗಬೇಕೆAದು ಸಲಹೆ ನೀಡಿದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್, ಪ.ಪಂ. ಸದಸ್ಯೆ ಶೀಲಾ ಡಿಸೋಜ ಅವರುಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಸದಸ್ಯರುಗಳಾದ ಬಿ.ಎನ್. ಬಸವರಾಜು, ಸಿ.ಪಿ. ದರ್ಶನ್, ಆರ್. ಲೋಹಿತಾಶ್ವ, ಇಂಜಿನಿಯರ್ ಸಿಂಧು, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರುಗಳಾದ ಪಿ.ಕೆ.ಚಂದ್ರು, ಸಂಜೀವ, ಜೀವನ್, ಜಯಂತಿ ಶಿವಕುಮಾರ್, ಮೋಹಿನಿ, ವಿನು, ಕಿರಣ್ ಉದಯಶಂಕರ್, ಮಾಜಿ ಅಧ್ಯಕ್ಷರುಗಳಾದ ಸುಮಾ ಸುದೀಪ್, ಲೀಲಾ ನಿರ್ವಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೆ.ಪಿ. ರವೀಶ್, ಎಂ.ಎ. ರುಬೀನಾ ಕಾರ್ಯಕ್ರಮ ನಿರ್ವಹಿಸಿದರು.