ಚೆಟ್ಟಳ್ಳಿ, ಜು. ೧೩: ಕಾಡಾನೆಯೊಂದು ನಿನ್ನೆ ತಡರಾತ್ರಿ ತೋಟದೊಳಗಿನ ಮನೆಯ ಮೇಲ್ಚಾವಣಿ, ಗಿಟಕಿ ಬಾಗಿಲು ಗೋಡೆಗಳಿಗೆ ಹಾನಿಗೊಳಿಸಿದ ಘಟನೆ ಕೂಡ್ಲೂರು ಚೆಟ್ಟಳ್ಳಿಯಲ್ಲಿ ನಡೆದಿದೆ.
ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿ ಸಮೀಪದ ಮೀನುಕೊಲ್ಲಿ ಅರಣ್ಯದಿಂದ ಹಗಲು ರಾತ್ರಿ ಕಾಡಾನೆಗಳು ಸಂಚರಿಸುತಿದ್ದು. ನಿನ್ನೆ ರಾತ್ರಿ ೯.೩೦ ಗಂಟೆಗೆ ಐಚೆಟ್ಟಿರ ಪ್ರಮೋದ್ ಪೂಣಚ್ಚ ಎಂಬವರ ಕಾಫಿ ತೋಟದೊಳಗಿರುವ ರೈಟರ್ ಕ್ವಾಟ್ರರ್ಸ್ನ ಮೇಲ್ಚಾವಣಿ, ಕಿಟಕಿ, ಬಾಗಿಲುಗಳನ್ನು ಹಾನಿಗೊಳಿಸಿದ ರಭಸಕ್ಕೆ ಗೋಡೆಗಳು ಬಿರುಕುಬಿಟ್ಟಿವೆ. ಅರಣ್ಯ ಇಲಾಖೆಯ ಡಿಆರ್ಎಫ್ಓ ಸುಬ್ರಾಯ ಅವರಿಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಡಾನೆಗಳು ಬರದಂತೆ ಅರಣ್ಯ ಇಲಾಖೆ ವಿದ್ಯುತ್ ತಂತಿ ಬೇಲಿಗಳನ್ನು ಹಾಕಿದ್ದು, ಕೆಲವೆಡೆ ವಿದ್ಯುತ್ ತಂತಿಗಳು ತುಂಡಾಗಿವೆ. ಆ ಜಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ತಂತಿ ಬೇಲಿಗಳನ್ನು ಅತೀ ಶೀಘ್ರ ದುರಸ್ತಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಕರುಣ್