ಗೋಣಿಕೊಪ್ಪಲು, ಜು. ೧೩: ಅಬಕಾರಿ ಇಲಾಖೆಯಲ್ಲಿ ಕೆಲವು ಭ್ರಷ್ಟ ವ್ಯವಸ್ಥೆಯನ್ನು ಹತೋಟಿಗೆ ತರಲು ಸಂಘವು ಇನ್ನಷ್ಟು ಸದೃಢಗೊಳ್ಳಬೇಕು. ಅಲ್ಲದೆ ಸನ್ನದುದಾರರ ಹಿತ ಕಾಪಾಡುವುದು ಸಂಘದ ಮೂಲ ಉದ್ದೇಶ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಅಭಿಪ್ರಾಯ ಪಟ್ಟರು.
ಮಡಿಕೇರಿಯ ರಾಜ್ದರ್ಶನ್ ಸಭಾಂಗಣದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೨೩-೨೪ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ೨೮ ಸಾವಿರದ ೧೨೦ ಕೋಟಿ ಆದಾಯವನ್ನು ಕೊಟ್ಟಂತಹ ದಾಖಲೆ ಅಬಕಾರಿ ಇಲಾಖೆದಾಗಿದೆ. ಮುಂದಿನ ಸಾಲಿನಲ್ಲಿ ೩೮ ಸಾವಿರದ ೫೨೫ ಕೋಟಿ ಗುರಿಯನ್ನು ನೀಡಿದೆ. ಇದನ್ನು ರಾಜ್ಯದ ಸನ್ನದುದಾರರು ಸಮಯಕ್ಕೆ ಸರಿಯಾಗಿ ಸರ್ಕಾರಕ್ಕೆ ಬರುವ ಆದಾಯವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಕೊಡಗು ಜಿಲ್ಲೆಯಲ್ಲಿಯೂ ೨೫೧ ಎಲ್ಲಾ ವರ್ಗದ ಸನ್ನದುದಾರರು ವ್ಯಾಪಾರೋದ್ಯಮ ನಡೆಸುತ್ತಾ, ಸರ್ಕಾರದ ಸುತ್ತೋಲೆಗಳನ್ನು ಪಾಲಿಸುವ ಮೂಲಕ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುತ್ತ ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜಿಲ್ಲೆಯ ಅಬಕಾರಿ ಇಲಾಖೆಯು ರಾಜ್ಯದಲ್ಲಿ ೩ನೇ ಸ್ಥಾನವನ್ನು ಪಡೆದಿರುವುದು ಶ್ಲಾಘನೀಯ ಎಂದರು.
ಪ್ರತಿ ಸನ್ನದುದಾರರು ಕನಿಷ್ಟ ೧೦ ಮಂದಿಗೆ ಉದ್ಯೋಗ ನೀಡುವ ಮೂಲಕ ೨೫೦೦ ಮಂದಿಗೆ ಆಶ್ರಯದಾತರಾಗಿದ್ದಾರೆ. ಇದರಲ್ಲಿ ಲೋಡರ್ಗಳು, ಕಾರ್ಮಿಕರು, ಕೆಲಸ ನಿರ್ವಹಿಸುತ್ತಿದ್ದಾರೆ. ಸನ್ನದುದಾರರು ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ಸರ್ಕಾರದ ಸುತ್ತೋಲೆಯಂತೆ ಕೆಲಸವನ್ನು ನಿರ್ವಹಿಸುತ್ತ ಬರುತ್ತಿವೆ. ಕೊಡಗಿನಾದ್ಯಂತ ಸನ್ನದುದಾರರಿಗೆ ನ್ಯಾಯ ಒದಗಿಸುವ ಸಲುವಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಹಿರಿಯರ ಮಾರ್ಗದರ್ಶನದಂತೆ ಸಂಘವನ್ನು ಮುನ್ನಡೆಸಲಾಗುತ್ತಿದೆ ಎಂದರು.
ಈಗಾಗಲೇ ಸಂಘದ ಕಾರ್ಯ ಚಟುವಟಿಕೆಗೆ ನೂತನ ಕಚೇರಿಯನ್ನು ಮಡಿಕೇರಿ ನಗರದಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ಸಾಲಿನಿಂದ ಮಹಾಸಭೆಗೆ ಪ್ರತಿ ಸನ್ನದುದಾರರು ತಮ್ಮ ಪರವಾಗಿ ಓರ್ವರನ್ನು ಕಳುಹಿಸಿಕೊಡುವ ಮೂಲಕ ಸಂಘವನ್ನು ಬಲಿಷ್ಟಗೊಳಿಸಲು ಸಹಕರಿಸಬೇಕು. ಇಲಾಖೆಯಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ಸಲುವಾಗಿ ಕೊಡಗಿನ ಶಾಸಕರುಗಳು ಈಗಾಗಲೇ ಅಬಕಾರಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇಲಾಖೆಯು ಹೊರಡಿಸುವ ಸುತ್ತೋಲೆಗಳನ್ನು ಹಾಗೂ ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಪಾಲಿಸುವ ಮೂಲಕ ವ್ಯಾಪಾರೋದ್ಯಮಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಕೆಲವು ಇಲಾಖಾಧಿಕಾರಿಗಳಿಗೆ ಭ್ರಷ್ಟಾಚಾರದಲ್ಲಿ ಮೂಗು ತೂರಿಸುವ ಅವಕಾಶವು ಇಲ್ಲದಂತಾಗುತ್ತದೆ. ಯಾವುದೇ ಸಮಸ್ಯೆಗಳು ಎದುರಾದಾಗ ಸಂಘದ ಪದಾಧಿಕಾರಿಗಳು ಒಟ್ಟಾಗಿ ನಿಂತು ಪ್ರಶ್ನಿಸಬೇಕಾಗಿದೆ ಎಂದರು. ಅಬಕಾರಿ ಇಲಾಖೆಗೆ ಉಪ ಆಯುಕ್ತರಾಗಿ ಕ್ಯಾಪ್ಟನ್ ಅಜಿತ್ಕುಮಾರ್ ಜವಾಬ್ದಾರಿ ವಹಿಸಿಕೊಂಡಿದ್ದು, ಸ್ಥಳೀಯರೇ ಆಗಿರುವುದರಿಂದ ಅವರಿಗೆ ಇಲ್ಲಿನ ಸಮಸ್ಯೆಗಳ ಅರಿವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಅಸೋಸಿಯೇಶನ್ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಹಿರಿಯ ಸನ್ನದುದಾರರಾದ ಕೆ.ಬಿ. ಶಾಂತಪ್ಪ ಮಾತನಾಡಿ, ಸಂಸ್ಥೆಯು ಈ ಹಿಂದೆ ಕೊಡಗಿನಲ್ಲಿ ಬಲಷ್ಠವಾಗಿತ್ತು, ವ್ಯಾಪಾರದಲ್ಲಿ ಲಾಭಾಂಶ ಅಧಿಕವಿತ್ತು. ಇತ್ತೀಚಿನ ದಿನಗಳಲ್ಲಿ ಸನ್ನದುದಾರರಿಗೆ ಲಾಭಾಂಶ ಕಡಿಮೆಯಾಗಿದೆ. ಇತ್ತೀಚೆಗೆ ಅಬಕಾರಿ ಇಲಾಖೆಯಲ್ಲಿ ಲಂಚ ಎಂಬುದು ಖಾಯಂ ಆಗಿದೆ. ಇದನ್ನು ಹತೋಟಿಗೆ ತರಲು ಸಂಘಟನೆ ಬಲಿಷ್ಠವಾಗಬೇಕು. ಒಮ್ಮತ್ತದ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆಪಿಸಿಸಿ ಸದಸ್ಯ ಸನ್ನದುದಾರರಾದ ಕುಶಾಲನಗರದ ಮಂಜುನಾಥ್ ಗುಂಡೂರಾವ್ ಮಾತನಾಡಿ, ಮದ್ಯ ಮಾರಾಟಗಾರರ ನಡುವೆ ಕೀಳರಿಮೆ ಬೇಡ. ಕರ್ನಾಟಕ ಸರ್ಕಾರ ನಡೆಸುವ ಹಲವು ಯೋಜನೆಗಳಿಗೆ ಆರ್ಥಿಕ ಸಹಕಾರ ನಮ್ಮಿಂದಲೇ ಲಭ್ಯವಾಗುತ್ತಿದೆ. ಯಾವುದೇ ಸರ್ಕಾರ ನಡೆಸಿದಾಗಲೂ ಸನ್ನದುದಾರರ ಶ್ರಮವೇ ಮೂಲ ಕಾರಣವಾಗಿದೆ. ನಾವು ಕಟ್ಟುತ್ತಿರುವ ತೆರಿಗೆ ಹಣದಿಂದಲೇ ಆರ್ಥಿಕ ಶಕ್ತಿ ಸುಧಾರಣೆಯಾಗುತ್ತಿದೆ. ನಮ್ಮ ಮಾರಾಟಗಾರರು ಮುಂಜಾನೆಯಿAದ ಸಂಜೆವರೆಗೆ ದುಡಿಯುವುದರಿಂದ ಸರ್ಕಾರದ ಆದಾಯ ಹೆಚ್ಚಾಗುತ್ತದೆ. ಸಹಕಾರ ಸಂಘದ ಮೂಲಕ ಅಸೋಸಿಯೇಶನ್ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು. ಸಭೆಯಲ್ಲಿ ಹಿರಿಯ ಸನ್ನದುದಾರರಾದ ಸುಜು ತಿಮ್ಮಯ್ಯ, ಹಲವು ಸಲಹೆಗಳನ್ನು ನೀಡಿದರು. ಸಂಘದ ಸಂಚಾಲಕ ಪ್ರದೀಪ್ ಕುಮಾರ್ ಪ್ರಾರ್ಥಿಸಿ, ಉಪಾಧ್ಯಕ್ಷ ಎನ್. ಮಹೇಶ್ ಕುಮಾರ್ ಸ್ವಾಗತಿಸಿ, ಖಜಾಂಚಿ ಬಿ.ಎ. ಮಹಾಬಲ ಲೆಕ್ಕಪತ್ರ ಮಂಡಿಸಿದರು. ವೀರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಎಸ್. ಅಯ್ಯಪ್ಪ ವಂದಿಸಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಬಿ.ಎಸ್. ಸುಂದರ, ಸಹ ಕಾರ್ಯದರ್ಶಿ ಬಾಬುನಾಯ್ಡು, ಪದಾಧಿಕಾರಿಗಳಾದ ವೀರಜ್, ಜಗದೀಶ್, ಬಿ.ಜಿ. ಮಂಜು, ಜೀವನ್, ಪಿ.ಡಬ್ಲೂö್ಯ. ಮಾದಪ್ಪ, ರಾಜಶೇಖರ್, ಟಿ.ಎಸ್. ಚಾಮಿ, ಅಮೃತ್ ಡಿಸ್ಟಿಲರಿಯ ಗೋವಿಂದರಾಜ್ ಸೇರಿದಂತೆ ಇನ್ನಿತರರು ಗಣ್ಯರು ಭಾಗವಹಿಸಿದ್ದರು.