ಐಗೂರು, ಜು. ೧೩: ಈಗಾಗಲೇ ಮಾದಾಪುರದ ಜಂಬೂರು ವ್ಯಾಪ್ತಿಯಲ್ಲಿ ಸುಮಾರು ೧೭ ಇಂಚಿನಷ್ಟು ಮಳೆಯಾಗಿದ್ದು, ಈ ಭಾಗದ ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಈ ವ್ಯಾಪ್ತಿಯಲ್ಲಿ ಬೆಳೆಗಾರರು ಕೃಷಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಹಿಂದೆ ಇದ್ದ ಕೃಷಿಕರ ಗದ್ದೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೆ ಗದ್ದೆಗಳನ್ನು ಕಾಫಿ ತೋಟಗಳಾಗಿ ಪರಿವರ್ತನೆ ಮಾಡಲಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳನ್ನು ವರ್ಷವಿಡಿ ನಿರ್ವಹಣೆ ಮಾಡಬೇಕಾದರೆ ಅಧಿಕ ಕೆಲಸ ಮತ್ತು ಖರ್ಚುಗಳಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಕೊರತೆಯನ್ನು ಎದುರು ನೋಡಬೇಕಾಗಿದ್ದು, ಕಡಿಮೆ ಖರ್ಚಿನ ಕಾರ್ಮಿಕರ ಕೆಲಸ ಮತ್ತು ವರ್ಷವಿಡಿ ನಿರ್ವಹಣೆ ಮಾಡಬೇಕಾದ ಅವಶ್ಯಕತೆ ಇಲ್ಲದಿರುವ ಲಾಭದಾಯಕ ಅಡಿಕೆ ಬೆಳೆಯ ತೋಟಗಳಾಗಿ ಕಾಫಿ ತೋಟಗಳು ಮಾರ್ಪಾಡಾಗಿವೆ ಎಂದು ರೈತ ಮೋಹನ್ ಹೇಳುತ್ತಾರೆ. ಈಗಾಗಲೇ ಅಡಿಕೆ ಗಿಡಗಳಿಗೆ ಒಂದು ಸುತ್ತು ಔಷಧಿ ಸಿಂಪಡಿಸುವ ಕೆಲಸಗಳು ಮುಗಿದಿವೆ. ಈ ಭಾಗದಲ್ಲಿ ಮಳೆ ಚುರುಕುಗೊಂಡ ಕಾರಣ ಕಾಫಿ ಮತ್ತು ಅಡಿಕೆ ಗಿಡಗಳ ಸುತ್ತಲೂ ಕಳೆಗಳು ಬೆಳೆದಿದ್ದು, ಕಳೆ ತೆಗೆಯುವ ಯಂತ್ರಗಳ ಮೂಲಕ ಕಳೆಗಳನ್ನು ಕಟಾವು ಮಾಡುವ ಕೆಲಸ ಭರದಿಂದ ಸಾಗುತ್ತಿದೆ. - ಸುಕುಮಾರ.