ಮಡಿಕೇರಿ, ಜು. ೧೩: ಹೆದ್ದಾರಿ ರಸ್ತೆ ಬದಿ ನಿಂತಿದ್ದ ವಾಹನ ಬೆಂಕಿಗಾಹುತಿಯಾದ ಘಟನೆ ಇಂದು ಸಂಜೆ ಮಡಿಕೇರಿ-ಸುಂಟಿಕೊಪ್ಪ ರಸ್ತೆಯಲ್ಲಿನ ಸಂಪಿಗೆಕಟ್ಟೆ ತಿರುವಿನ ಬಳಿಯ ಬಿಗ್ ಕಪ್ ಕೆಫೆ ಸಮೀಪ ನಡೆದಿದೆ. ಇಂದು ಬೆಳಿಗ್ಗೆ ಕೆಂಪು ಬಣ್ಣದ ಸ್ವಿಫ್ಟ್ ಕಾರು (ಕೆಎ-೫೩ ಎಂ.ಜಿ ೩೪೬೨), ಕೆಫೆಯ ಸಮೀಪ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಟ್ಟೆಗೆ ಹೊಡೆದಿದೆ.

ಚಾಲಕ ಬೆಂಗಳೂರಿನ ಶ್ರೀನಿವಾಸ್ ಎಂಬವರು ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಇತರೆಡೆಗೆ ತೆರಳಿದ್ದಾರೆ.ನಿಂತಿದ್ದ ಈ ವಾಹನದಲ್ಲಿ ಸಂಜೆ ಸುಮಾರು ೬.೧೫ಕ್ಕೆ ಡಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ೧೧೨ ಗೆ ಕರೆ ಮಾಡಿದ್ದು, ಸ್ಥಳಕ್ಕೆ ಸಂಚಾರಿ, ನಗರ ಠಾಣೆ ಪೊಲೀಸ್ ಆಗಮಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ವಾಹನದ ನೋಂದಣಿ ಸಂಖ್ಯೆ ಆಧಾರದಲ್ಲಿ ಮಾಲೀಕ ಶ್ರೀನಿವಾಸ್‌ಗೆ ಪೊಲೀಸರು ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ ವಾಹನ ಸಂಪೂರ್ಣ ಅಗ್ನಿಗಾಹುತಿಯಾಗಿದೆ.

ಘಟನಾ ಸ್ಥಳದಲ್ಲಿ ಮಡಿಕೇರಿ ಅಗ್ನಿಶಾಮಕ ಘಟಕದ ಎಫ್.ಎಸ್.ಒ ಶೋಭಿತ್ ಹಾಗೂ ಸಿಬ್ಬಂದಿ, ಮಡಿಕೇರಿ ನಗರ ಠಾಣೆ ಎಸ್.ಐ ಲೋಕೇಶ್, ಸಂಚಾರಿ ಠಾಣೆ ಎಸ್.ಐ ಶ್ರೀಧರ್ ಹಾಗೂ ಸಿಬ್ಬಂದಿ ಇದ್ದರು. ಬೆಂಕಿ ನಂದಿಸುವ ವೇಳೆ ಕೆಲಕಾಲ ಮಡಿಕೇರಿ ಕಾರ್ಯಪ್ಪ ವೃತ್ತದವರೆಗೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಚಾರಿ ಠಾಣೆ ಪೊಲೀಸರು ಟ್ರಾಫಿಕ್ ನಿಯಂತ್ರಿಸು ವಲ್ಲಿ ನಿರತರಾಗಿದ್ದರು.