ಪೊನ್ನಂಪೇಟೆ, ಜು. ೧೩: ಉದ್ಯಮ ಕ್ಷೇತ್ರದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಎಂದು ಯುಎಸ್‌ಎ ಟೆಕ್ನಾಲಜಿ ಕಂಪೆನಿಯ ಉಪಾಧ್ಯಕ್ಷ ಕೇಚಮಾಡ ಅಯ್ಯಪ್ಪ ಹೇಳಿದರು.

ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫ್ಯೂಚರ್ ಇನ್ ಕಂಪ್ಯೂಟರ್ ಸೈನ್ಸ್ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಂಪ್ಯೂಟರ್ ವಿಜ್ಞಾನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಕಂಪ್ಯೂಟರ್ ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕೋರ್ಸ್ಗೆ ಇಂದು ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ಹೊಸ ಹೊಸ ಸಾಫ್ಟ್ವೇರ್‌ಗಳನ್ನು ಪರಿಚಯ ಮಾಡಿಕೊಂಡು, ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಇಂದು ಉದ್ಯೋಗಕ್ಕಾಗಿ ಅಮೇರಿಕಾ ಸೇರಿದಂತೆ ಇತರ ದೇಶಗಳಿಗೆ ತೆರಳಬೇಕಾದ ಅವಶ್ಯಕತೆ ಇಲ್ಲ. ನಮ್ಮದೇ ರಾಜ್ಯದ ಬೆಂಗಳೂರಿನಲ್ಲಿ ಅತ್ಯುತ್ತಮ ಕಂಪೆನಿಗಳು ಇದ್ದು, ಇಲ್ಲಿಯೇ ಉದ್ಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಇದೇ ಸಂದರ್ಭ ಕಂಪ್ಯೂಟರ್ ಸೈನ್ಸ್ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಎ.ಬಿ. ಚೇತನ್ ಚಿಣ್ಣಪ್ಪ, ಎನ್‌ಎಸ್‌ಎಸ್ ಅಧಿಕಾರಿ ವಿಪ್ರ ನೀಲಮ್ಮ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.